ಬದಿಯಡ್ಕ: ಇತ್ತೀಚೆಗೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ನಿಂದಾಗಿ ಮರಣಹೊಂದಿದ ಕುಂಬ್ಡಾಜೆ ಗ್ರಾಮ ಪಂಚಾಯತಿಯ 3ನೇ ವಾರ್ಡು ಬೇರ್ಕಡವಿನ ವೃದ್ಧೆಯ ಶವವನ್ನು ತರಲು ಹಲವರನ್ನು ಸಂಪರ್ಕಿಸಿದರೂ ಆಂಬುಲೆನ್ಸ್ ಲಭಿಸದಿರುವುದು ಆಡಳಿತ ವರ್ಗದ ಬೇಜವಬ್ಧಾರಿಯನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಆರೋಪಿಸಿದೆ. ಮೃತದೇಹ ಕರೆತರಲು ಆಂಬುಲೆನ್ಸ್ ಗಾಗಿ ಗ್ರಾಮ ಪಂಚಾಯತು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸಂಪರ್ಕಿಸಲಾಯಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವೈದ್ಯರಿಗೆ ಪೋನ್ ಕರೆ ಮಾಡಿದಾಗ ಅಧ್ಯಕ್ಷರನ್ನೋ, ಉಪಾಧ್ಯಕ್ಷ ರನ್ನೋ ಕರೆ ಮಾಡಲು ಸೂಚಿಸಿದರು. ಅಧ್ಯಕ್ಷರಿಗೆ ಹಲವು ಸಲ ಕರೆ ಮಾಡಿದರೂ ಪೋನ್ ಕರೆಗಳನ್ನು ಸ್ವೀಕರಿಸಿಲ್ಲ. ನಂತರ ಉಪಾಧ್ಯಕ್ಷ ರಿಗೆ ಪೋನ್ ಕರೆ ಮಾಡಿದಾಗ ಚಾಲಕನಲ್ಲಿ ಮಾತನಾಡಿ ಈಗ ತಿಳಿಸುವ ಎಂದು ಹೇಳಿ ಬಳಿಕ ಪೋನ್ ಕರೆ ಮಾಡಿ ಚಾಲಕನಿಗೆ ಇವತ್ತು ಬಿಡುವಿಲ್ಲ ಆದ್ದರಿಂದ ಆಂಬುಲೆನ್ಸ್ ಲಭ್ಯವಾಗದು, ಬೇರೆ ವ್ಯವಸ್ಥೆಯನ್ನು ನೋಡಿಕೊಳ್ಳಲು ಸೂಚಿಸಿದರು. ಇದೀಗ ಕುಂಬ್ಡಾಜೆ ಯ ಆಂಬುಲೆನ್ಸ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇದು ಕುಂಬ್ಡಾಜೆ ಯ ಯು ಡಿ ಎಫ್ - ಎಲ್ ಡಿ ಎಫ್ ಮೈತ್ರಿಕೂಟದ ಆಡಳಿತದ ನಿಷ್ಕ್ರಿಯತೆ ಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಇತ್ತೀಚೆಗೆ ಭಾರೀ ಪ್ರಚಾರ ನೀಡಿ ಕಾಸರಗೋಡು ಶಾಸಕರಿಂದ ಉದ್ಘಾಟನೆ ಗೊಳಿಸಿ ಆಂಬುಲೆನ್ಸ್ ಸೌಕರ್ಯವನ್ನು ಆರಂಬಿಸಲಾಗಿತ್ತು. ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸುವ ಆಡಳಿತ ವರ್ಗದ ಈ ನೀತಿ ಪ್ರತಿಭಟನಾರ್ಹವಾಗಿದೆ. ಬಡ ಪರಿಶಿಷ್ಟ ವರ್ಗದ ವೃದ್ಧೆಯ ಶವವನ್ನು ಕರೆತರಲು ಉಪಕಾರಕ್ಕೆ ಸಿಗದಿರುವುದು ಆ ಕುಟಮಬಕ್ಕೆ ಹಾಗೂ ಬಡವರಲ್ಲಿ ತೋರುವ ಅನ್ಯಾಯವಾಗಿದೆ. ಮಾತ್ರವಲ್ಲ ಈ ಕೊರೋನ ಕಾಲದಲ್ಲಿ ಬೇಜವಬ್ಧಾರಿತನವನ್ನು ತೋರಿಸುವ ಆಡಳಿತ ವರ್ಗದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಇನ್ನೂ ಇದೇ ರೀತಿ ಮುಂದುವರಿದಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷ ರವೀಂದ್ರ ರೈ ಗೋಸಾಡ ಹಾಗೂ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೇಮೂಲೆಯವರು ಪತ್ರಿಕಾ ಪ್ರಕಟಣೆ ಯಲ್ಲಿ ಮುನ್ನೆಚ್ಚರಿಕೆಯನ್ನು ನೀಡಿರುವರು.