- ಮಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರು ಇಂದ
- ಬೆಳಿಗ್ಗೆ ನಿಧನರಾದರು.
- ಎಳವೆಯಲ್ಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಇವರು ತಮ್ಮ ತಂದೆಯವರಿಂದಲೇ ಯಕ್ಷಗಾನ ಅಭ್ಯಸಿ ತನ್ನ 13ನೇ ವಯಸ್ಸಿನಲ್ಲೇ ಇರಾ ಸೋಮನಾಥೇಶ್ವರ ಮೇಳದಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ್ದರು. ಆ ಬಳಿಕ ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ ಮೇಳ, ಕಟೀಲು ಮೇಳ, ಹೊಸನಗರ ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡಿ ಕಳೆದ ಕೆಲ ವರ್ಷಗಳ ಹಿಂದೆ ಬಣ್ಣ ಹಚ್ಚುವುದು ನಿಲ್ಲಿಸಿದ್ದರು.
ದೇವೇಂದ್ರ, ಕರ್ಣ, ಅರ್ಜುನ, ಹಿರಣ್ಯಾಕ್ಷ, ದಕ್ಷ, ರಕ್ತಬಿಜಾಸುರ, ಇಂದ್ರಜಿತು, ಕೌಂಡ್ಲಿಕ, ಭಾನುಕೋಪ ಶಿಶುಪಾಲ, ಕಾತವೀರ್ಯ, ಅರುಣಾಸುರ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಶೀನಪ್ಪ ರೈ ಅವರು ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ 1943ರ ಜೂನ್ 7ರಂದು ಜನಿಸಿದ್ದರು.
ಇವರ ಕಲಾ ಸೇವೆಗಾಗಿ ರಾಜ್ಯ ಪ್ರಶಸ್ತಿ, ಯಕ್ಷಗಾನ ಬಯಲಾಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದುಬಂದಿದೆ.
ಶೀನಪ್ಪ ರೈ ಗಳ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಒಂದು ತಲೆಮಾರಿನ ಧೀಮಂತ ಕಲಾ ಕಣಜದ ಕೊಂಡಿ ಕಳಚಿಕೊಂಡಿದೆ. ರೈಗಳ ಅಗಲುವಿಕೆಗೆ ಅನೇಕ ಮಂದಿ ಕಲಾವಿದರು,ಕಲಾಸ್ವಾದಕರು ಹಾಗೂ ಕಲಾಪೋಷಕರು ಕಂಬನಿಮಿಡಿದಿದ್ದಾರೆ.