ಕಾಸರಗೋಡು: ಫ್ಯಾಷನ್ ಗೋಲ್ಡ್ ವಂಚನೆ ಪ್ರಕರಣ ತನಿಖೆ ಅತಂತ್ರತೆಯಲ್ಲಿದೆ ಎಂದು ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಟಿ.ಕೆ.ಪೂಕೋಯಾ ತಂಙಳ್ ಒಂಬತ್ತು ತಿಂಗಳಿಂದ ಪರಾರಿಯಾಗಿದ್ದಾನೆ. ಏತನ್ಮಧ್ಯೆ, ಹೂಡಿಕೆದಾರರು ತಮ್ಮ ಹಣವನ್ನು ಮರಳಿ ಪಡೆಯಲು ನಿರಂತರ ಪ್ರಯತ್ನದಲ್ಲಿದ್ದು, ಪ್ರತಿಭಟಿಸುತ್ತಿದ್ದಾರೆ. ಆಭರಣ ವ್ಯವಹಾರವನ್ನು ಮಂಜೇಶ್ವರದ ಮಾಜೀ ಶಾಸಕ ಎಂ.ಸಿ ಕಮರುದ್ದೀನ್, ಪೂಕೋಯಾ ತಂಙಳ್ ಮತ್ತು ಅವರ ಪುತ್ರ ಎಪಿ ಇಶಮ್ ನಿಯಂತ್ರಿಸಿದ್ದರು.
ಫ್ಯಾಶನ್ ಗೋಲ್ಡ್ ವ್ಯವಸ್ಥಾಪಕ ನಿರ್ದೇಶಕ ಪೂಕೋಯಾ ನನ್ನು ವಶಕ್ಕೆ ಪಡೆದು ಪ್ರಶ್ನಿಸಿದರೆ ಮಾತ್ರ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಇದಲ್ಲದೆ, ಪಯ್ಯನ್ನೂರು ಶಾಖಾ ವ್ಯವಸ್ಥಾಪಕ,ಪೂಕೋಯನ ಪುತ್ರ ಎಪಿ ಇಶಮ್ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ವಿಚಾರಣೆಗೆ ಹಾಜರಾದ ನಿರ್ದೇಶಕರಾದ ಪಿ.ಎಸ್. ಅಶ್ರಫ್,ಪಿ. ಕುಂಞಬ್ದುಲ್ಲ ಅವರ ಹೇಳಿಕೆಗಳನುಸಾರ, ಪೂಕೋಯಾ ಮತ್ತವರ ಪುತ್ರರ ಮೇಲೆ ಗಂಭೀರ ಆರೋಪಗಳಿದ್ದವು.
ಈ ಪ್ರಕರಣದ ಮೊದಲ ಆರೋಪಿ ಪೂಕೋಯಾ ತಂಙಲ್. ಪ್ರಕರಣ ದಾಖಲಾಗಿ ಒಂದು ವರ್ಷಗಳಷ್ಟು ಸನಿಹ ತಿಂಗಳುಗಳಾಗುತ್ತಿದ್ದರೂ ಪೂಕೋಯಾ ಅವರನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂಬ ಆಕ್ರೋಶ ವ್ಯಾಪಕವಾಗಿದೆ. 600 ಕ್ಕೂ ಹೆಚ್ಚು ಹೂಡಿಕೆದಾರರು ತಮ್ಮ ಹಣವನ್ನು ಮರಳಿ ಪಡೆಯಲು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಪಡೆಯಬೇಕಾದ ಮೊತ್ತ ಸುಮಾರು 100 ಕೋಟಿ ರೂ. ಹಣವನ್ನು ಮರಳಿ ಪಡೆಯಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಹೂಡಿಕೆದಾರರು ಒತ್ತಾಯಿಸಿದ್ದಾರೆ.