ಬೀಜಿಂಗ್: ಕೊರೋನಾ ವೈರಸ್ ಮೂಲ ಚೀನಾದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ ಆರಂಭವಾಗಿದ್ದು, ಚೀನಾದ ಫ್ಯೂಜಿಯನ್ ಪ್ರಾಂತ್ಯ ಮತ್ತು ಚೊಂಗ್ಕಿಂಗ್ ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಚೀನಾ ಮಾತ್ರವಲ್ಲದೇ ಆಸ್ಟ್ರೇಲಿಯಾದಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಎರಡೂ ದೇಶಗಳಲ್ಲಿನ ಸೋಂಕು ಹೆಚ್ಚಳಕ್ಕೆ ಡೆಲ್ಟಾ ರೂಪಾಂತರವೇ ಕಾರಣ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಜಗತ್ತಿಗೆ ಎಚ್ಚರಿಕೆ ನೀಡುತ್ತಿದ್ದು, ಡೆಲ್ಟಾ ರೂಪಾಂತರವನ್ನು ಕಟ್ಟಿಹಾಕದಿದ್ದರೇ ಜಗತ್ತಿಗೇ ಮಾರಣಾಂತಿಕವಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.
ಚೀನಾದ ನ್ಯಾನ್ಜಿಂಗ್ ನಗರದಲ್ಲಿ 200ಕ್ಕೂ ಹೆಚ್ಚು ಡೆಲ್ಟಾ ರೂಪಾಂತರಿ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂಬತ್ತು ಕ್ಲೀನರ್ಗಳು ಡೆಲ್ಟಾ ಸೋಂಕಿಗೆ ತುತ್ತಾಗಿದ್ದಾರೆ. ಚೊಂಗ್ಕಿಂಗ್ ಸೇರಿದಂತೆ ಡೆಲ್ಟಾ ಸೋಂಕು ಪ್ರಾಂತ್ಯಗಳ ಪಟ್ಟಿಗೆ ಶನಿವಾರ ಒಂದೇ ಐದು ಪ್ರಾಂತ್ಯಗಳು ಸೇರ್ಪಡೆಯಾಗಿವೆ.
ವಿಶ್ವಾದ್ಯಂತ, ಕೊರೋನವೈರಸ್ ಸೋಂಕುಗಳು ಮತ್ತೊಮ್ಮೆ ಏರಿಕೆಯಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕಳೆದ ನಾಲ್ಕು ವಾರಗಳಲ್ಲಿ ಆರು ದೇಶಗಳಲ್ಲಿ, ಡೆಲ್ಟಾ ರೂಪಾಂತರದಿಂದ ಸೋಂಕು ಉಲ್ಬಣವಾಗುತ್ತಿರುವುದರ ಕುರಿತು ದತ್ತಾಂಶ ಕಲೆಹಾಕಿದೆ. ಮೊದಲಿಗೆ ಭಾರತದಲ್ಲಿ ಪತ್ತೆಯಾಗಿದ್ದ ಡೆಲ್ಟಾ ರೂಪಾಂತರ ಈಗ 132 ದೇಶಗಳಿಗೆ ವ್ಯಾಪಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಸ್ಥಿತಿ ವಿಭಾಗದ ಮೈಕೆಲ್ ರಯಾನ್ ಅವರು, 'ಡೆಲ್ಟಾ ಒಂದು ಎಚ್ಚರಿಕೆ ಕರೆಗಂಟೆಯಾಗಿದ್ದು, ನಾವು ಹೆಚ್ಚು ಅಪಾಯಕಾರಿ ರೂಪಾಂತರಗಳನ್ನು ಹೊರಹೊಮ್ಮಿಸುವ ಮೊದಲು ಅದನ್ನು ನಿಗ್ರಹಿಸಬೇಕಿದೆ. ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು ಸೇರಿದಂತೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು. ಆದರೆ ಉನ್ನತ ಮತ್ತು ಕಡಿಮೆ ಆದಾಯದ ರಾಷ್ಟ್ರಗಳು ಡೆಲ್ಟಾ ಸೋಂಕಿನ ವಿರುದ್ಧ ಮೇಲುಗೈ ಸಾಧಿಸಲು ಹೆಣಗಾಡುತ್ತಿವೆ.
ಆಸ್ಟ್ರೇಲಿಯಾದಲ್ಲಿ, ಜನಸಂಖ್ಯೆಯಲ್ಲಿ ಶೇ.14ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆಸಿಸ್ ನ ಮೂರನೇ ಅತಿದೊಡ್ಡ ನಗರ ಬ್ರಿಸ್ಬೇನ್ ನಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಕ್ವೀನ್ಸ್ ಲ್ಯಾಂಡ್ ನ ಇತರ ಭಾಗಗಳಲ್ಲಿ ಕೋವಿಡ್ ಕ್ಲಸ್ಟರ್ ಪ್ರದೇಶಗಳ ಸಂಖ್ಯೆ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.