ನವದೆಹಲಿ: ಸುಮಾರು 16 ಲಕ್ಷ ಕಿಲೋಮೀಟರ್ ವೇಗದ ಸೌರ ಬಿರುಗಾಳಿ ಭೂಮಿಯನ್ನು ಸಮೀಪಿಸುತ್ತಿದ್ದು, ರವಿವಾರ ಅಥವಾ ಸೋಮವಾರ ಭೂಮಿಯನ್ನು ಅಪ್ಪಳಿಸಲಿದೆ. ಸೂರ್ಯನ ವಾತಾವರಣದಿಂದ ಆರಂಭ ವಾಗಿರುವ ಈ ಸೌರ ಬಿರುಗಾಳಿ ಭೂಮಿಯ ಅಯಸ್ಕಾಂತೀಯ ಕ್ಷೇತ್ರದ ಪ್ರಭಾವ ಇರುವ ಪ್ರದೇಶದ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ಸ್ಪೇಸ್ ವೆದರ್.ಕಾಮ್ ಹೇಳಿದೆ.
ಇದರ ಪರಿಣಾಮವಾಗಿ ಆಕರ್ಷಕ ಸೌರವಿದ್ಯಮಾನದ ದೃಶ್ಯವನ್ನು ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸವಿರುವ ಜನ ವೀಕ್ಷಿಸಬಹುದಾಗಿದೆ. ಇಲ್ಲಿನ ಆಸುಪಾಸಿನ ಜನ ರಾತ್ರಿಯ ವೇಳೆಗೆ ಈ ರಮಣೀಯ ದೃಶ್ಯಕ್ಕೆ ಸಾಕ್ಷಿಯಾಗಬಹುದು.
ಸಾಸಾ ವಿಜ್ಞಾನಿಗಳ ಪ್ರಕಾರ ಸೌರಬಿರುಗಾಳಿ 16 ಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ. ಇದರ ವೇಗ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಉಪಗ್ರಹ ಸಿಗ್ನಲ್‌ಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ.
ಸೌರ ಬಿರುಗಾಳಿಯಿಂದ ಭೂಮಿಯ ಹೊರವರ್ತುಲದ ವಾತಾವರಣದಲ್ಲಿ ತಾಪಮಾನ ಹೆಚ್ಚಲಿದ್ದು, ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದೆ. ಇದು ಜಿಪಿಎಸ್ ನೇವಿಗೇಶನ್, ಮೊಬೈಲ್ ಫೋನ್ ಸಿಗ್ನಲ್ ಹಾಗೂ ಉಪಗ್ರಹ ಟಿವಿ ಸಿಗ್ನಲ್‌ಗಳಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಾಹ ಹೆಚ್ಚಿ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ ಎಂದು ಸ್ಪೇಸ್ ವೆದರ್.ಕಾಮ್ ಎಚ್ಚರಿಸಿದೆ.