ನವದೆಹಲಿ: ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿಗೆ ಕಾಲಮಿತಿ ವಿಧಿಸುವುದಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾ.ಎಲ್ ನಾಗೇಶ್ವರ್ ರಾವ್ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ಪೀಠ, ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಎಂಬಿಬಿಎಸ್ ವೈದ್ಯರೂ ಆಗಿರುವ ಅಡ್ವೊಕೇಟ್ ಸುಭಾಷ್ ವಿಜಯರನ್ ಶಿಕ್ಷಣದಲ್ಲಿ ಮೀಸಲಾತಿಯಿಂದ ನೀಡುವುದು ಹೆಚ್ಚು ಅರ್ಹ ವಿದ್ಯಾರ್ಥಿಯ ಸೀಟ್ ನ್ನು ಕಡಿಮೆ ಅರ್ಹ ವಿದ್ಯಾರ್ಥಿಗೆ ನೀಡುವುದಾಗಿದೆ. ಈ ನೀತಿಯಿಂದ ದೇಶದ ಪ್ರಗತಿಗೆ ಕುಂಠಿತವಾಗುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದರು. ಹಿಂದುಳಿದ ವರ್ಗಗಳ ಪಟ್ಟಿಗಾಗಿ ಜನ ಹೋರಾಟ ನಡೆಸುತ್ತಿದ್ದು ರಕ್ತ ಹರಿಸಲು ಸಿದ್ಧರಿದ್ದಾರೆ.
ವೈದ್ಯರು, ವಕೀಲರು, ಇಂಜಿನಿಯರ್ ಗಳು ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವುದಕ್ಕೆ ಮೀಸಲಾತಿಯನ್ನು ಬಳಕೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ( ಐಎನ್‌ಐ) ಗಳಾದ ಎಐಐಎಂಎಸ್, ಎನ್ ಎಲ್ ಯುಗಳು, ಐಐಟಿಗಳು, ಐಐಎಂಗಳಲ್ಲಿಯೂ ಮೀಸಲಾತಿಯನ್ನು ಬಿಟ್ಟಿಲ್ಲ. ಮೀಸಲಾತಿ ಇನ್ನೂ ಎಷ್ಟು ವರ್ಷ ಮುಂದುವರೆಯಲಿದೆ? ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ಅಶೋಕ್ ಕುಮಾರ್ ಠಾಕೂರ್ ಅವರ ತೀರ್ಪನ್ನು ಅರ್ಜಿಯಲ್ಲಿ ಉಲ್ಲೇಖಿಸಿ "ಬಹುತೇಕ ನ್ಯಾಯಾಧೀಶರು ಪ್ರತಿ 5 ವರ್ಷಕ್ಕೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯನ್ನು ಮರುಪರಿಶೀಲನೆ ಮಾಡಬೇಕು ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಈ ವರೆಗೂ ಅಂತಹ ಯಾವುದೇ ಕ್ರಮಗಳನ್ನೂ ಕೈಗೊಳ್ಳಲಾಗಿಲ್ಲ" ಎಂದು ವಾದಿಸಲಾಗಿತ್ತು. ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.