ನವದೆಹಲಿ: ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಎರಡು ದಿನಗಳ ಭೇಟಿಗಾಗಿ ಮಂಗಳವಾರ ದೆಹಲಿಗೆ ಆಗಮಿಸಿದ್ದಾರೆ. ಭೇಟಿ ವೇಳೆಯಲ್ಲಿ ದ್ವಿಪಕ್ಷೀಯ ಸಂಬಂಧ, ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕತೆ, ಇಂಡೋ- ಫೆಸಿಪಿಕ್ ಸೇರಿದಂತೆ ಮತ್ತಿತರ ವಿಚಾರ ಕುರಿತಂತೆ ಭಾರತದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಅಮೆರಿಕ ರಾಜ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಂಟನಿ ಬ್ಲಿಂಕೆನ್ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಧೀರ್ಘ ಸಹಭಾಗಿತ್ವ ಮತ್ತಿತರ ವಿಚಾರ ಕುರಿತಂತೆ ಉಭಯ ದೇಶಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆಯಿದೆ. ರಕ್ಷಣಾ ನೀತಿ ವಿನಿಮಯ, ಕಾರ್ಯಾಚರಣೆ, ರಕ್ಷಣಾ ಸಲಕರಣೆಗಳ ವರ್ಗಾವಣೆ ಮತ್ತು ತಂತ್ರಜ್ಞಾನವೂ ಇದರಲ್ಲಿ ಸೇರಿದೆ.
ಈ ವರ್ಷದ ಕೊನೆಯಲ್ಲಿ ಅಮೆರಿಕದಲ್ಲಿ ನಡೆಯಲಿರುವ ನಾಲ್ಕನೇ 2 + 2 ಮಂತ್ರಿ ಸಂವಾದದ ಸಂದರ್ಭದಲ್ಲಿ ಇವುಗಳ ಬಗ್ಗೆ ಹೆಚ್ಚಿನ ವಿವರನ್ನು ತಿಳಿಸಲಾಗುತ್ತದೆ.