ಪತ್ತನಂತಿಟ್ಟು: ಪ್ರಸಿದ್ದ ಕವಯಿತ್ರಿ ಸುಗತಕುಮಾರಿಯ ನೆನಪಿಗಾಗಿ ಬುಡಕಟ್ಟು ಗ್ರಾಮಗಳಿಗೆ ಪ್ರಯಾಣಿಸುವ ಆಸ್ಪತ್ರೆಗಳಿಗೆ ಸೇವಾಭಾರತಿ ಚಾಲನೆ ನೀಡಲಿದೆ. ತಿರುವನಂತಪುರ, ಕೊಲ್ಲಂ ಮತ್ತು ಪತ್ತನಂತಿಟ್ಟು ಜಿಲ್ಲೆಗಳಲ್ಲಿ ಬುಡಕಟ್ಟು ಗ್ರಾಮಗಳ 25 ಪಂಚಾಯಿತಿಗಳಲ್ಲಿ ಈ ಆಸ್ಪತ್ರೆ ಕಾರ್ಯಾಚಲಿಸಲಿವೆ. ಸೇವಾಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ವಿಜಯನ್ ಈ ಬಗ್ಗೆ ಮಾಹಿತಿ ನೀಡಿರುವರು.
ಬುಡಕಟ್ಟು ಹಳ್ಳಿಗಳಲ್ಲಿ ಜೀವನ ಸಾಗಿಸುವ ಸಾಮಾನ್ಯ ಜನವರ್ಗ ಅನುಭವಿಸುವ ಸವಾಲುಗಳಿಗೆ ಸುಗತಕುಮಾರಿ ಅವರು ಮುಂದಿಟ್ಟ ಕನಸಿನ ಯೋಜನೆಗಳಲ್ಲಿ ಇದು ಒಂದು. ಈ ಯೋಜನೆಯು ಸುಗತಕುಮಾರಿ ಅವರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಂಚಿಕೊಂಡ ವಿಚಾರಗಳನ್ನು ಆಧರಿಸಿದೆ. ಈ ಕಲ್ಪನೆಯನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಸೇವಾ ಭಾರತಿಗೆ ವಹಿಸಲಾಯಿತು. ದೆಹಲಿ ಮೂಲದ ಕ್ವಿಕ್ ಹೀಲ್ ಆಂದೋಲನವು ಈ ಯೋಜನೆಗಾಗಿ ವೈದ್ಯಕೀಯ ವ್ಯಾನ್ ನ್ನು ಸೇವಾ ಭಾರತಿಗೆ ನೀಡಿತು.
ವೈದ್ಯಕೀಯ ವ್ಯಾನ್‍ನಲ್ಲಿ ವೈದ್ಯರು, ದಾದಿ ಮತ್ತು ಸ್ವಯಂಸೇವಕರ ಸೇವೆಗಳನ್ನು ಖಾತ್ರಿಪಡಿಸಿಕೊಳ್ಳಲಾಗುವುದು. ಸ್ಥಳದಲ್ಲೇ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುವುದು. ತೀವ್ರ ಅಸ್ವಸ್ಥರಿಗೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಯಾ ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಮೂರು ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳು ಮತ್ತು ತಜ್ಞ ವೈದ್ಯರ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಪ್ರತಿ ಗ್ರಾಮದಲ್ಲಿ ಒಂದು ವಾರ ಕ್ಯಾಂಪಿಂಗ್ ಮಾಡುವ ಮೂಲಕ ತಪಾಸಣೆ ನಡೆಸಲಾಗುವುದು. ಎಲ್ಲಾ ಗ್ರಾಮಗಳಲ್ಲಿ ಆರೋಗ್ಯಕರ ಜೀವನವನ್ನು ನಡೆಸುವ ಉದ್ದೇಶದಿಂದ ಸೇವಾ ಭಾರತಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.