ನವದೆಹಲಿ: ವಿದೇಶದಿಂದ ಭಾರತಕ್ಕೆ ಬಂದು ಅಧಿಕೃತವಾಗಿ ಯೋಗ ಕಲಿಯಲು ಬಯಸುವವರಿಗಾಗಿ ಸರ್ಕಾರದ 'ಸ್ಟಡಿ ಇನ್ ಇಂಡಿಯಾ' ಕಾರ್ಯಕ್ರಮದಲ್ಲಿ ಇನ್ನು ಮುಂದೆ ಯೋಗ ತರಬೇತಿಯನ್ನು ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ತಿಳಿಸಿದರು.
ಲೋಕಸಭೆಯಲ್ಲಿ ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿ ಈ ಮಾಹಿತಿ ನೀಡಿದರು.
'ಸ್ಟಡಿ ಇನ್ ಇಂಡಿಯಾ' ಎನ್ನುವುದು ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ವೈದ್ಯಕೀಯ ಮಂಡಳಿಯ ಸಹಯೋಗದೊಂದಿಗೆ 2018ರ ಏಪ್ರಿಲ್‌ನಲ್ಲಿ ಪ್ರಾರಂಭಿಸಲಾಗಿದೆ' ಎಂದು ತಿಳಿಸಿದರು.
'ಯುಜಿಸಿಯು ಬೆಂಗಳೂರಿನಲ್ಲಿ ಅಂತರ ವಿಶ್ವವಿದ್ಯಾಲಯ ಯೋಗ ವಿಜ್ಞಾನ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿದೆ. 2017ರ ಜನವರಿಯಿಂದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ (ಎನ್‌ಇಟಿ) ಯೋಗವನ್ನು ಒಂದು ವಿಷಯವನ್ನಾಗಿ ಸೇರ್ಪಡೆ ಮಾಡಲಾಗಿದೆ. 9 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯೋಗ ವಿಭಾಗಗಳನ್ನು ಸ್ಥಾಪಿಸಲಾಗಿದೆ' ಎಂದು ಪ್ರಧಾನ್ ವಿವರಿಸಿದರು.