ಕಾಸರಗೋಡು: "ರೇಬೀಸ್ ಫ್ರೀ ಕಾಸರಗೋಡು" ಯೋಜನೆ ಜಿಲ್ಲೆಯಲ್ಲಿ ಆರಂಭಗೊಂಡಿದೆ.
ವಿಶ್ವ ಯೂನೋಸಿಸ್ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ರೇಬೀಸ್ ಸೋಂಕು ನಿವಾರಣೆ ಉದ್ದೇಶದೊಂದಿಗೆ ಈ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲ ಸಾಕು ನಾಯಿಗಳಿಗೆ ಚುಚ್ಚುಮದ್ದು ನೀಡಿ ಅರ್ಹತಾಪತ್ರ ವಿತರಿಸಿ, 2021 ಡಿ.31ರ ವೇಳೆಗೆ ಜಿಲ್ಲೆಯನ್ನು ರೇಬೀಸ್ ಬಾಧೆ ಮುಕ್ತಗೊಳಿಸುವ ಯೋಜನೆ ಇದಾಗಿದೆ.
ಕಾಸರಗೋಡು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಯೋಜನೆಯನ್ನು ಉದ್ಘಾಟಿಸಿದರು. ಜಿಲ್ಲಾ ಪಶುಸಂಗೋಪನೆ ಅಧಿಕಾರಿ ಡಾ.ಪಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜರಾಮ, ಪಂಚಾಯತ್ ಸಹಾಯಕ ನಿರ್ದೇಶಕ ಕೆ.ವಿ.ಹರಿದಾಸ್, ಇಂಡಿಯನ್ ವೆಟರ್ನರಿ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಡಾ.ಪಿ.ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು. ಪಶುಸಂಗೋಪನೆ ಇಲಾಖೆ ನಿರ್ದೇಶಕ ಡಾ.ಜಿ.ಎಂ.ಸುನಿಲ್ ವರದಿ ವಾಚಿಸಿದರು. ಪ್ರಧಾನ ವೆಟರ್ನರಿ ಅಧಿಕಾರಿ ಡಾ.ಎಸ್.ರಾಜಲಕ್ಷ್ಮಿ ಸ್ವಾಗತಿಸಿದರು. ಜಂತುರೋಗ ನಿವಾರಣೆ ಯೋಜನೆ ಜಿಲ್ಲಾ ಸಂಚಾಲಕಿ ಡಾ.ಮಂಜು ವಂದಿಸಿದರು.