ಮಂಗಳೂರು: ಕಾಸರಗೋಡು ಜಿಲ್ಲೆಯ ಗಡಿ ಮೂಲಕ ಕರ್ನಾಟಕ ಪ್ರವೇಶಿಸಲು ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿಯನ್ನು ಸಲ್ಲಿಸಬೇಕೆಂಬ ನಿಯಮ ಜಾರಿಯಲ್ಲಿರುವುದರಿಂದ ಯಾತ್ರಾರ್ಥಿಗಳಿಗೆ ತೊಡಕುಗಳು ಎದುರಾಗುತ್ತಿದ್ದು ಪರಿಹಾರವನ್ನು ಒದಗಿಸುವಂತೆ ಕೋರಿ ಮಂಜೇಶ್ವರ ಕ್ಷೇತ್ರದ ಶಾಸಕ ಎ ಕೆ ಎಂ ಅಶ್ರಫ್ ರವರು ದಕ್ಷಿಣ ಕನ್ನಡ ಜಿಲ್ಲಾ ದಂಡಾಧಿಕಾರಿ ಹಾಗೂ ಪೋಲೀಸ್ ಆಯುಕ್ತ ಡಾ.ಕೆ ವಿ ರಾಜೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕೇರಳ ರಾಜ್ಯದಲ್ಲಿ ಕೊರೊನಾ ಡೆಲ್ಟಾ ರೂಪಾಂತರಿ ಪತ್ತೆಯಾದುದರಿಂದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ತಪಾಸಣೆಯ ಹೆಸರಿನಲ್ಲಿ ಜನರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಆಯುಕ್ತರು ಭರವಸೆ ನೀಡಿದ ಬಗ್ಗೆ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ.ಗಡಿ ದಾಟಲು 72 ಗಂಟೆಯ ಒಳಗಾಗಿ ಪಡೆದ ಆರ್ ಟಿ ಪಿ ಸಿ ಆರ್ ವರದಿ ಹೊಂದಿರಬೇಕು ಎಂಬ ನಿಯಮವಿದ್ದರೂ ವರದಿ ಇಲ್ಲದ ಯಾತ್ರಿಕರಿಗೆ ರಾಪಿಡ್ ಟೆಸ್ಟ್ ನಡೆಸಲು ಗಡಿಯಲ್ಲಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಕಳೆದ ಲಾಕ್ಡೌನ್ ವೇಳೆ ಕೇರಳದ ಜನತೆ ಎದುರಿಸಿದ ಸಮಸ್ಯೆಗಳು ಹಾಗೂ ಹಾನಿಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದೆಂದೂ ಕೇರಳದ ತಿರುವಂತಪುರದಲ್ಲಿ ನಾಗರಿಕ ಸೇವಾ ತರಬೇತಿಯನ್ನು ಪಡೆದ ನನಗೆ ಕೇರಳ ರಾಜ್ಯದ ಜನತೆಯೊಂದಿಗೆ ಅಂತರಾಳದ ಬಾಂಧವ್ಯ ಉಳಿದಿದೆ ಎಂದು ಶ್ರೀ ಕೆ ವಿ ರಾಜೇಂದ್ರರವರು ಶಾಸಕ ಎ ಕೆ ಎಂ ಅಶ್ರಫ್ ರವರಿಗೆ ತಿಳಿಸಿದರು.