ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಆಗುವ ಸಾಧಕ- ಬಾಧಕಗಳ ಕುರಿತು ಪಕ್ಷದ ಹಿರಿಯ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಎ.ಕೆ. ಆಂಟನಿ, ಮಲ್ಲಿಕಾರ್ಜುನ ಖರ್ಗೆ, ಕಮಲ್ ನಾಥ್, ಅಂಬಿಕಾ ಸೋನಿ, ಹರೀಶ್ ರಾವತ್, ಕೆ.ಸಿ. ವೇಣುಗೋಪಾಲ್ ಮತ್ತು ಇತರರು ಈ ಸಂಬಂಧ ಜುಲೈ 22ರಂದು ಗಾಂಧಿ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಶಾಂತ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಆಗುವ ಸಾಧಕ-ಬಾಧಕಗಳು ಹಾಗೂ ಪ್ರಶಾಂತ್ ಅವರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಎಂಬುದು ಸಭೆಯ ಮುಖ್ಯ ಕಾರ್ಯಸೂಚಿಯಾಗಿತ್ತು ಎಂದು ಮೂಲಗಳು ಹೇಳಿವೆ.
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಪ್ರಶಾಂತ್ ಅವರು ಕಾಂಗ್ರೆಸ್ ಸೇರಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳಿಗೂ ಮುನ್ನ ಜುಲೈ 13ರಂದು ಪ್ರಶಾಂತ್ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಆದರೆ, ಈ ಬೆಳವಣಿಗೆ ಕುರಿತು ಕಾಂಗ್ರೆಸ್ ಪಕ್ಷವಾಗಲಿ, ಪ್ರಶಾಂತ್ ಕಿಶೋರ್ ಅವರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.