ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಗಳಲ್ಲಿ ಕಾಸರಗೋಡು ನಗರಸಭೆ ಅತ್ಯುತ್ತಮ ಸಾಧನೆ ಮಾಡುತ್ತಿದೆ. ವಾರ್ಡ್ ಮಟ್ಟದಲ್ಲಿ ಜರಗುತ್ತಿರುವ ವಾಕ್ಸಿನೇಷನ್ ಶಿಬಿರಕ್ಕೆ ಉತ್ತಮ ಸಾರ್ವಜನಿಕ ಸಹಭಾಗಿತ್ವ ಲಭಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಕೋವಿಡ್ ತಪಾಸಣೆ ಮತ್ತು ವಾಕ್ಸಿನೇಷನ್ ಚಟುವಟಿಕೆಗಳಲ್ಲಿ ಕಾಸರಗೋಡು ನಗರಸಭೆಯ ಸಾಧನೆ ಇತರರಿಗೆ ಮಾದರಿಯಾಗುತ್ತಿದೆ. ಜು.14ರಿಂದ ವಾರ್ಡ್ ಮಟ್ಟದಲ್ಲಿ ವಾಕ್ಸಿನೇಷನ್ ಶಿಬಿರವನ್ನು ನಗರಸಭೆ ಆರಂಭಿಸಿತ್ತು. ಪರಸ್ಪರ ಸಮೀಪದ ಮೂರು ವಾರ್ಡ್ ಗಳನ್ನು ಒಂದು ಕ್ಲಸ್ಟರ್ ಎಂಬಂತೆ ವಿಂಗಡಿಸಿ ಪೂರಕ ಕೇಂದ್ರವೊಂದರಲ್ಲಿ ಲಸಿಕೆ ನೀಡುವ ಶಿಬಿರ ನಡೆಸಲಾಗುತ್ತಿದೆ. 12 ಕ್ಲಸ್ಟರ್ ಗಳಲ್ಲಿ ವಾಕ್ಸಿನೇಷನ್ ಕೇಂದ್ರ ಸಜ್ಜುಗೊಳಿಸಿ ಪ್ರತಿ ವಾರ್ಡ್ ನ 150 ಮಂದಿಗೆ ಲಸಿಕೆ ನೀಡಲಾಗುತ್ತಿದೆ.
ಸದ್ರಿ 19,200 ಮಂದಿಗೆ ಈಗಾಗಲೇ ವಾಕ್ಸಿನೇಷನ್ ನಡೆಸಲಾಗಿದೆ. ಮೊದಲ ದಿನ 7 ವಾರ್ಡ್ ಗಳಲ್ಲಿ ಶಿಬಿರ ನಡೆದಿದ್ದು, ಅಂದು 700 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ವಿದ್ಯಾರ್ಥಿಗಳು, ವಯೋವೃದ್ಧರು, ವಿಶೇಷಚೇತನರು, ಕೋವೀಶೀಲ್ಡ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿ 84 ದಿನ ಕಳೆದು, ಎರಡನೇ ಡೋಸ್ ಗಾಗಿ ಕಾಯುತ್ತಿರುವವರು ಮೊದಲಾದವರಿಗೆ ಆದ್ಯತೆ ನೀಡಿ ಶಿಬಿರ ನಡೆಸಲಾಗುತ್ತಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 3.30 ವರೆಗೆ ಶಿಬಿರ ನಡೆಯುತ್ತಿದೆ.
ಮೊದಲ ಹಂತದ ಶಿಬಿರ ಪೂರ್ಣಗೊಂಡ ತಕ್ಷಣ 2ನೇ ಹಂತದ ಶಿಬಿರ ನಡೆಸಲು ನಗರಸಭೆ ತೀರ್ಮಾನಿಸಿದೆ.