ಲಂಡನ್: ಕೋವಿಡ್-19 ಉಂಟುಮಾಡುವ ರೋಗಾಣುಗಳಿಗೆ ಪ್ರತಿಕ್ರಿಯಿಸುವ ಮಹಿಳೆಯರು ಹಾಗೂ ಪುರುಷರಲ್ಲಿನ ರೋಗನಿರೋಧಕ ವ್ಯವಸ್ಥೆಯಲ್ಲಿನ ಪ್ರಮುಖ ವ್ಯತ್ಯಾಸಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ಯೇಲ್ ವಿಶ್ವವಿದ್ಯಾಲಯದಲ್ಲಿ ಈ ಸಂಶೋಧನೆ ನಡೆದಿದ್ದು, ಕೋವಿಡ್-19 ನಿಂದ ಹೆಚ್ಚು ಬಳಲಿ ಸಾವನ್ನಪ್ಪುವ ಸಾಧ್ಯತೆ ಹೊಂದಿರುವ ಪುರುಷರಲ್ಲಿನ ರೋಗನಿರೋಧಕ ಪ್ರಕ್ರಿಯೆಗೆ ಹೆಚ್ಚು ಸಂಬಂಧಿಸಿದ ಚಯಾಪಚಯ ಪ್ರತಿಕ್ರಿಯಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ಜರ್ನಲ್ ಸೈನ್ಸ್ ಸಿಗ್ನಲಿಂಗ್ ನಲ್ಲಿ ಪ್ರಕಟಗೊಂಡ ಈ ಅಧ್ಯಯನದಲ್ಲಿ ಅಮೈನೊ ಆಸಿಡ್ ಚಯಾಪಚಯದ ಉತ್ಪನ್ನವಾಗಿರುವ ಕೈನುರೆನಿಕ್ ಆಮ್ಲ ಮಟ್ಟ ಪುರುಷ ಕೋವಿಡ್-19 ರೋಗಿಗಳಲ್ಲಿ, ಮಹಿಳೆಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಸಂಶೋಧಕರು ಕಂಡುಕೊಂಡಿರುವುದು ವರದಿಯಾಗಿದೆ.
ಕೈನುರೆನಿಕ್ ಆಮ್ಲ ಮಟ್ಟ ಹೆಚ್ಚಾಗಿರುವುದು ಸ್ಕಿಜೋಫ್ರೇನಿಯಾ ಮತ್ತು ಎಚ್ಐವಿ ಸಂಬಂಧಿತ ರೋಗಗಳಿಗೆ ಸಂಬಂಧಪಟ್ಟಿರುವುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕೋವಿಡ್-19 ಸೋಂಕು ತೀವ್ರವಾಗಿರುವ ಪುರುಷ ರೋಗಿಗಳಲ್ಲಿ ಕೈನುರೆನಿಕ್ ಆಮ್ಲದಿಂದ ಕೈನುರೆನೈನ್ ಅಂಶ ಹೆಚ್ಚಾಗಿದ್ದು, ಪೋಷಕಾಂಶದ ನಿಯಾಸಿನ್ ಸೃಷ್ಟಿಸಲು ಉಪಯುಕ್ತವಾಗುತ್ತದೆ.
ರೋಗವೊಂದರಲ್ಲಿ ಬದಲಾದ ಜೀವರಾಸಾಯನಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇದು ಸಹಕಾರಿ ಎನ್ನುತ್ತಾರೆ ಸಂಶೋಧಕರು. ಈ ರೀತಿ ಮಾಡುವುದರಿಂದ ಸ್ಪಷ್ಟವಾದ ರೋಗ ಮಾದರಿಯನ್ನು ಅಭಿವೃದ್ಧಿಪಡಿಸಿ ಅದರ ಚಿಕಿತ್ಸೆಗೆ ಸಮರ್ಥವಾದ ಮಾರ್ಗ ಕಂಡುಕೊಳ್ಳಬಹುದಾಗಿದೆ ಎಂದು ಬ್ರಿಟನ್ ನ ಸ್ಟ್ರಾಥ್‌ಕ್ಲೈಡ್ ವಿಶ್ವವಿದ್ಯಾಲಯದ ನಿಕೋಲಸ್ ರಾಟ್ರೇ ಹೇಳಿದ್ದಾರೆ.
"ಕೋವಿಡ್-19 ನ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಚಯಾಪಚಯ ಕ್ರಿಯೆಯ ಪ್ರಮುಖ ಪಾತ್ರವನ್ನು ಈ ಸಂಶೋಧನೆ ತೋರುತ್ತಿದ್ದು, ವ್ಯಕ್ತಿಯೋರ್ವನ ವಿವಿಧ ರೋಗನಿರೋಧಕ ಸ್ಥಿತಿ ರೋಗಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ" ಎನ್ನುತ್ತಾರೆ ವಿಶ್ವವಿದ್ಯಾಲಯದ ನಿಕೋಲಸ್ ರಾಟ್ರೇ
ಯೇಲ್ ನ್ಯೂ ಹೆವನ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದ 22 ಮಹಿಳೆಯರು ಹಾಗೂ 17 ಪುರುಷ ರೋಗಿಗಳ ರಕ್ತ ಮಾದರಿಗಳನ್ನು ಸಂಶೋಧಕರು ತಮ್ಮ ಅಧ್ಯಯನಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಮಾದರಿಗಳನ್ನು ಸೋಂಕು ತಗುಲದೇ ಇರುವ 20 ಮಂದಿಯ ಮಾದರಿಗಳಿಗೆ ಹೋಲಿಕೆ ಮಾಡಲಾಗಿದೆ.
ಸಂಶೋಧಕರು ಸಕಾರಾತ್ಮಕವಾಗಿ ಜೀರ್ಣ ಹಾಗೂ ಸೆಲ್ಯುಲಾರ್ ಪ್ರಕ್ರಿಯೆಗಳ ಆಣ್ವಿಕ ಉತ್ಪನ್ನಗಳಾದ 75 ಮೆಟಬೊಲೈಟ್ ಗಳನ್ನು ಗುರುತಿಸಿದ್ದಾರೆ. ಇದನ್ನು ರೋಗಿಯ ಲಿಂಗ, ದೇಹ-ದ್ರವ್ಯರಾಶಿ ಸೂಚ್ಯಂಕ (body-mass index) ಹಾಗೂ ಇನ್ನಿತರ ಗುಣಲಕ್ಷಣಗಳಿಗೆ ಹೋಲಿಕೆ ಮಾಡಿದಾಗ 17 ಮೆಟಬೊಲೈಟ್ ಗಳಿಗೂ ಕೋವಿಡ್-19 ಸೋಂಕಿಗೂ ಸಂಬಂಧವಿರುವುದು ಪತ್ತೆಯಾಗಿದೆ.
ಮುಂದುವರಿದ ಸಂಶೋಧನೆಯಲ್ಲಿ ಪುರುಷ ರೋಗ ನಿರೋಧಕ ಪ್ರತಿಕ್ರಿಯೆಯಲ್ಲಿನ ಕೈನುರೆನಿಕ್ ಆಮ್ಲದ ಅಧಿಕ ಮಟ್ಟ ಹಾಗೂ ಕೈನುರೆನಿಕ್ ಆಮ್ಲದಿಂದ ಕೈನುರೆನೈನ್ ಗೆ ಇರುವ ಅಧಿಕ ಅನುಪಾತ ಹಾಗೂ ರೋಗಿಯಲ್ಲಿನ ಕೆಟ್ಟ ಫಲಿತಾಂಶಗಳಿಗೂ ಸಂಬಂಧವಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.