ನವದೆಹಲಿ: ನೀಟ್ (UG) 2021 ಪರೀಕ್ಷೆಯ ದಿನಾಂಕ ನಿಗದಿಯಾಗಿದ್ದು, ದೇಶಾದ್ಯಂತ ಸೆಪ್ಟೆಂಬರ್ 12ರಂದು ಪರೀಕ್ಷೆ ನಡೆಸಲಿರುವುದಾಗಿ ಕೇಂದ್ರ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಈ ಹಿಂದೆ ಆಗಸ್ಟ್ 1ರಂದು ಪರೀಕ್ಷೆ ನಿಗದಿಯಾಗಿತ್ತು. ಇದೀಗ ಸೆಪ್ಟೆಂಬರ್ 12ಕ್ಕೆ ದಿನಾಂಕ ನಿಗದಿಗೊಳಿಸಲಾಗಿದೆ.
ಜುಲೈ 13ರಿಂದಲೇ ಅರ್ಜಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜುಲೈ 13ರ ಸಂಜೆ 5 ಗಂಟೆಯಿಂದ ಅರ್ಜಿ ಪ್ರಕ್ರಿಯೆ ಶುರುವಾಗುವುದು. ಎನ್‌ಟಿಎ ವೆಬ್‌ಸೈಟ್ ಮುಖಾಂತರ ಅರ್ಜಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ನಿಯಮಗಳನ್ನು ಪಾಲನೆಯೊಂದಿಗೆ ಪರೀಕ್ಷೆ ನಡೆಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಬೇಕಾಗಿರುವ ಕಾರಣ ಪರೀಕ್ಷೆ ನಡೆಯುವ ನಗರಗಳ ಸಂಖ್ಯೆಯನ್ನು 155ರಿಂದ 198ಕ್ಕೆ ಏರಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಫೇಸ್ ಮಾಸ್ಕ್ ನೀಡಲಾಗುವುದು. ಎಲ್ಲಾ ನಿಯಮಗಳನ್ನು ಪಾಲನೆ ಮಾಡುವತ್ತ ನಿಗಾ ವಹಿಸಲಾಗುವುದು. ಎಲ್ಲೂ ಸಮಸ್ಯೆಯಾಗದ ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.