ನವದೆಹಲಿ: ಕೊರೊನಾ ಸೋಂಕಿನ ಸುಲಭ ಪತ್ತೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, RT-LAMP ಎಂಬ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
"ಕೊರೊನಾ ಸೋಂಕಿನ ಸುಲಭ ಪತ್ತೆಗೆ ಇದಕ್ಕಿಂತ ಅತ್ಯಾಧುನಿಕ ಉಪಕರಣಗಳ ಅಗತ್ಯವಿಲ್ಲ" ಎಂದು ಐಸಿಎಂಆರ್ ಹೇಳಿಕೊಂಡಿದೆ. ವೈರಲ್ ಆರ್‌ಎನ್‌ಎ ಪತ್ತೆಗೆ ಈ ಸಾಧನ ಸಹಕಾರಿಯಾಗಲಿದ್ದು, ಹಿಂದಿನ ಪಿಸಿಆರ್ ಪರೀಕ್ಷೆಗಿಂತ ಅತಿ ವೇಗವಾಗಿ ಸೋಂಕಿನ ವಿಶ್ಲೇಷಣೆ ನಡೆಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಹೀಗಾಗಿ ಕೊರೊನಾ ವೈರಾಣುವನ್ನು ಅತಿ ವೇಗವಾಗಿ ಪತ್ತೆ ಹಚ್ಚಿ ಹರಡುವಿಕೆಯನ್ನು ಸುಲಭವಾಗಿ ತಡೆಯುವ ನಿರೀಕ್ಷೆ ವ್ಯಕ್ತಗೊಂಡಿದೆ.
ಕಳೆದ ವರ್ಷ, ಕೊರೊನಾ ಸೋಂಕು ಹರಡುವಿಕೆ ತಡೆಗೆ ಹೆಚ್ಚೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳಿತ್ತು.
ಈ ಕಾರಣವಾಗಿ ಐಸಿಎಂಆರ್ ಹಾಗೂ ಎನ್‌ಐವಿ ಒಟ್ಟಾಗಿ ಸೂಕ್ಷ್ಮ ಹಾಗೂ ಕೈಗೆಟುಕುವ ದರದಲ್ಲಿ RT-LAMP ಸಾಧನ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದೆ. ವೇಗ, ನಿಖರ ಹಾಗೂ ಕಡಿಮೆ ವೆಚ್ಚದಲ್ಲಿ ಸೋಂಕಿನ ಪರೀಕ್ಷೆ ಸಾಧ್ಯವಾಗಲಿದೆ. ಸದ್ಯಕ್ಕೆ ಇದನ್ನು ವಾಣಿಜ್ಯೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಆತಂಕದಲ್ಲಿ ಈ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದು ಐಸಿಎಂಆರ್ ಒತ್ತಿ ಹೇಳಿದೆ. ಈ ಸಾಧನದ ಕುರಿತು ಇನ್ನಷ್ಟು ವಿವರಗಳನ್ನು ಐಸಿಎಂಆರ್ ಶೀಘ್ರವೇ ಹಂಚಿಕೊಳ್ಳಲಿರುವುದಾಗಿ ತಿಳಿಸಿದೆ.