ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಟೋಕಿಯೊಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಕೋರಿದರು.
ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾ ವೇದಿಕೆಯಲ್ಲಿ ಮಿಂಚಲು ಇಡೀ ಭಾರತವೇ ನಿಮ್ಮ ಬೆನ್ನಿಗೆ ನಿಂತಿದೆ ಎಂದು ಅವರು ಎಲ್ಲರಲ್ಲೂ ವಿಶ್ವಾಸ ತುಂಬಿದರು.
ಅಪ್ರತಿಮ ಮಹಿಳಾ ಬಾಕ್ಸರ್ ಎಂ. ಸಿ. ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಪ್ರತಿಭಾವಂತ ಶೂಟರ್ ಸೌರಭ್ ಚೌಧರಿ, ಶೂಟರ್ ಎಲವೆನಿಲ್ ವಲರಿವನ್ ಮತ್ತು ಅನುಭವಿ ಟೇಬಲ್ ಟೆನಿಸ್ ಆಟಗಾರ ಎ. ಶರತ್ ಕಮಲ್ ಸೇರಿ ಹಲವರೊಂದಿಗೆ ಪ್ರಧಾನಿ ವರ್ಚುವಲ್ ಸಮಾಲೋಚನೆಯಲ್ಲಿ ಮಾತನಾಡಿದರು.
'ನಿರೀಕ್ಷೆಗಳಿಂದ ವಿಚಲಿತರಾಗಬೇಡಿ, ಅತ್ಯುತ್ತಮವಾದದ್ದನ್ನು ಸಾಧಿಸಿ,' ಎಂದು ಮೋದಿ ಸಂವಾದದಲ್ಲಿ ಸಂದೇಶ ನೀಡಿದರು.
ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಕ್ರೀಡಾ ಯಾನವನ್ನು ಪ್ರೋತ್ಸಾಹಿಸಿದ ಅವರ ಪೋಷಕರನ್ನು ಪ್ರಧಾನಿ ಇದೇ ವೇಳೆ ಪ್ರಶಂಸಿಸಿದರು.
"ನೀವು ಒಲಿಂಪಿಕ್ಸ್‌ನಿಂದ ಹಿಂತಿರುಗಿದ ನಂತರ ನಾನು ನಿಮ್ಮೊಂದಿಗೆ ಐಸ್‌ಕ್ರೀಮ್ ಸವಿಯುತ್ತೇನೆ" ಎಂದು ಪಿ.ವಿ ಸಿಂಧು ಅವರಿಗೆ ನರೇಂದ್ರ ಮೋದಿ ಭರವಸೆ ನೀಡಿದರು.