ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಲಸಿಕೆಯ ಪ್ರಾಯೋಗಿಕ ಮಾಹಿತಿಯು ಉತ್ತವಾಗಿರುವುದಾಗಿ ತಿಳಿಸಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಶೀಘ್ರವೇ ಕೋವ್ಯಾಕ್ಸಿನ್ ಅನುಮೋದನೆ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, "ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಅಂತಿಮ ಹಂತದ ಪ್ರಯೋಗದ ಮಾಹಿತಿಗಳನ್ನು ಪರಿಶೀಲಿಸಿದ್ದು, ಲಸಿಕೆಯು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸಿದೆ" ಎಂದು ಹೇಳಿದ್ದಾರೆ.
ಶನಿವಾರ, ಕೋವ್ಯಾಕ್ಸಿನ್ ಲಸಿಕೆ ವಿವರಗಳನ್ನು ಹಂಚಿಕೊಂಡಿದ್ದ ಭಾರತ್ ಬಯೋಟೆಕ್, ಕೋವ್ಯಾಕ್ಸಿನ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ 77.8% ದಕ್ಷತೆ ತೋರಿರುವುದು ಸಾಬೀತಾಗಿದೆ ಎಂದು ಹೇಳಿಕೊಂಡಿತ್ತು. ಗಂಭೀರ ಕೊರೊನಾ ಸೋಂಕಿನ ವಿರುದ್ಧವೂ ಭಾರತ್ ಬಯೋಟೆಕ್ ಲಸಿಕೆ 93.4% ಪರಿಣಾಮಕಾರಿಯಾಗಿದೆ. ಜೊತೆಗೆ ಈಗಿರುವ ಅಪಾಯಕಾರಿ ಡೆಲ್ಟಾ ವಿರುದ್ಧ 65.2% ರಕ್ಷಣೆ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿತ್ತು.
ಲಸಿಕೆಯ ದಕ್ಷತೆ ಪ್ರಮಾಣ ಈ ಕೆಳಗಿನಂತಿದೆ...
ಲಕ್ಷಣರಹಿತ ಸೋಂಕಿನ ಪ್ರಕರಣ: 63% ಪರಿಣಾಮಕಾರಿ ಸೌಮ್ಯ ಹಾಗೂ ಗಂಭೀರ ಸ್ವರೂಪದ ಸೋಂಕು: 78% ಪರಿಣಾಮಕಾರಿ ಡೆಲ್ಟಾ ರೂಪಾಂತರ: 65% ಪರಿಣಾಮಕಾರಿ
ಅತಿ ಗಂಭೀರ ಸ್ವರೂಪದ ಸೋಂಕಿನ ಪ್ರಕರಣ: 93% ಪರಿಣಾಮಕಾರಿ