ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಪ್ರಬಲ ಹೋರಾಟಕ್ಕೆ ಎರಡು ಕೊರೊನಾ ಲಸಿಕೆಗಳ ಮಿಶ್ರ ಡೋಸ್ ನೀಡುವ ಕುರಿತು ಕಳೆದ ತಿಂಗಳಿನಿಂದ ಚರ್ಚೆಗಳು ಕೇಳಿಬರುತ್ತಿವೆ. ಎರಡು ಭಿನ್ನ ಕಂಪನಿಯ ಕೊರೊನಾ ಲಸಿಕೆಯ ಡೋಸ್‌ಗಳನ್ನು ನೀಡುವುದು ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ನೆರವಾಗುತ್ತದೆ. ಹೀಗಾಗಿ ಮಿಶ್ರ ಡೋಸ್ ನೀಡಿದರೆ ಕೊರೊನಾ ಸೋಂಕನ್ನು ಹತೋಟಿಗೆ ತರಬಹುದು ಎಂದು ಕೆಲವು ತಜ್ಞರು ಸಲಹೆ ನೀಡಿದ್ದರು.
ಆದರೆ ಇದನ್ನು ಅಪಾಯಕಾರಿ ಬೆಳವಣಿಗೆ ಎಂದು ಕರೆದಿರುವ ವಿಶ್ವ ಆರೋಗ್ಯ ಸಂಸ್ಥೆ, ಲಸಿಕೆಗಳ ಮಿಶ್ರಣದ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಪ್ರಯೋಗಕ್ಕೆ ಮುಂದಾಗುವುದು ಸೂಕ್ತವಲ್ಲ ಎಂದು ಸೋಮವಾರವಷ್ಟೇ ಹೇಳಿಕೆ ನೀಡಿತ್ತು. ಈ ಹೇಳಿಕೆ ಬೆನ್ನಲ್ಲೇ ಇದೀಗ ಭಾರತದಲ್ಲಿ ಕೊರೊನಾ ಲಸಿಕೆಗಳ ಮಿಶ್ರ ಡೋಸ್ ನೀಡುವ ಸಂಬಂಧ ಪ್ರಯೋಗ ನಡೆಯುತ್ತಿದೆ.
ಜುಲೈ ತಿಂಗಳ ಕೊನೆಯ ವೇಳೆಗೆ ಸ್ಪುಟ್ನಿಕ್ ವಿ ಹಾಗೂ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಮಿಶ್ರ ಡೋಸ್ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ಆರ್‌ಡಿಐಎಫ್ (ರಷ್ಯಾ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್) ಸಿಇಒ ಕಿರಿಲ್ ಡೆಮ್ರಿಟಿವ್ ತಿಳಿಸಿದ್ದಾರೆ. ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸ್ಪುಟ್ನಿಕ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ಮಿಶ್ರ ಡೋಸ್ ಪ್ರಯೋಗ ನಡೆಸಲಾಗುತ್ತಿದೆ. ಇದರಿಂದ ಉತ್ತಮ ಫಲಿತಾಂಶ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಸ್ಪುಟ್ನಿಕ್ ವಿ-ಕೋವಿಶೀಲ್ಡ್ ಮಿಶ್ರ ಡೋಸ್ ಪ್ರಯೋಗ
ಭಾರತದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಹಾಗೂ ಭಾರತದ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಯ ಮಿಶ್ರ ಡೋಸ್ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ, ಈ ಮಿಶ್ರ ಡೋಸ್ ಹಾಗೂ ಬೂಸ್ಟರ್ ಡೋಸ್ ಲಸಿಕೆಯನ್ನು ಸೆರಂ ಇನ್‌ಸ್ಟಿಟ್ಯೂಟ್ ಉತ್ಪಾದನೆ ಮಾಡಲಿರುವುದಾಗಿ ತಿಳಿದುಬಂದಿದೆ.
ಮಿಕ್ಸ್ ಅಂಡ್ ಮ್ಯಾಚ್ ಕೊರೊನಾ ಲಸಿಕೆ ಎಂದರೇನು?
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಮನುಷ್ಯನ ದೇಹದಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿಗೆ ಎರಡು ಭಿನ್ನ ಕಂಪನಿಗಳ ಕೊರೊನಾ ಲಸಿಕೆಗಳ ಸಂಯೋಜನೆಯನ್ನು ಒಬ್ಬ ವ್ಯಕ್ತಿಗೆ ನೀಡುವುದನ್ನು ಮಿಶ್ರ ಡೋಸ್ ಎನ್ನಬಹುದು. ಮೊದಲ ಡೋಸ್ ಒಂದು ಕಂಪನಿಯ ಲಸಿಕೆಯದ್ದಾದರೆ, ಮತ್ತೊಂದು ಕಂಪನಿಯ ಎರಡನೇ ಡೋಸ್ ಲಸಿಕೆ ಪಡೆಯಲು ಈ ಪ್ರಯೋಗದಲ್ಲಿ ಸೂಚಿಸಲಾಗಿರುತ್ತದೆ. ಈ ಕುರಿತು ಕೆಲವು ಅಧ್ಯಯನಗಳು ನಡೆದಿದ್ದು, ಈ ಮಿಶ್ರ ಡೋಸ್ ಹೆಚ್ಚಿನ ಪ್ರತಿಕಾಯ ವೃದ್ಧಿಗೆ ನೆರವಾಗುತ್ತದೆ ಎಂದು ತಿಳಿಸಿವೆ. ಆದರೆ ಇದು ಪ್ರಾಥಮಿಕ ಅಧ್ಯಯನ ಮಾಹಿತಿ ಎಂದು ತಿಳಿಸಿವೆ.
"ಮಿಶ್ರಡೋಸ್ ಲಸಿಕೆ ಪರಿಣಾಮಕಾರಿ ಹೌದು. ಆದರೆ ಈ ಕುರಿತು ಇನ್ನಷ್ಟು ಅಧ್ಯಯನಗಳ ಅವಶ್ಯಕತೆಯಿದೆ. ಯಾವ ಯಾವ ಲಸಿಕೆಗಳನ್ನು ಸಂಯೋಜೆನ ಮಾಡಬೇಕು ಎನ್ನುವುದರ ಕುರಿತು ಸ್ಪಷ್ಟತೆ ಸಿಗಬೇಕಿದೆ" ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದರು.
ಮಿಶ್ರ ಡೋಸ್ ಬಗ್ಗೆ ಎಚ್ಚರಿಕೆ ಕೊಟ್ಟಿದ್ದ WHO
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಒಬ್ಬರಿಗೆ ಎರಡು ಭಿನ್ನ ಕಂಪನಿಗಳ ಲಸಿಕೆಗಳ ಬಳಕೆಯನ್ನು "ಅಪಾಯಕಾರಿ ಪ್ರವೃತ್ತಿ" ಎಂದು ಕರೆದಿದ್ದು, ಈ ಪ್ರಯೋಗದ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಆರೋಗ್ಯದ ಮೇಲೆ ಇದರ ಪರಿಣಾಮದ ಬಗ್ಗೆಯೂ ಸೂಕ್ತ ಅರಿವಿಲ್ಲ. ಹೀಗಾಗಿ ಈ ಪ್ರಯೋಗವನ್ನು ಮಾಡದೇ ಇರುವುದು ಒಳಿತು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
"ಭಿನ್ನ ಕಂಪನಿಗಳ ಕೊರೊನಾ ಲಸಿಕೆಗಳನ್ನು ಒಂದೇ ವ್ಯಕ್ತಿಗೆ ಬಳಸುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಸಾಕ್ಷ್ಯಗಳು ದೊರೆತಿಲ್ಲ. ಹೀಗಾಗಿ ಅರಿವಿಲ್ಲದೇ ಲಸಿಕೆಗಳನ್ನು ಸಂಯೋಜಿಸಿ ಬಳಸಿದರೆ ಅಪಾಯ ಎದುರಾಗಬಹುದು" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ.