ತಿರುವನಂತಪುರಂ: ಕೊರೊನಾ ಸೋಂಕಿನ ವಿರುದ್ಧ ದೇಶಾದ್ಯಂತ ಲಸಿಕಾ ಅಭಿಯಾನ ನಡೆಯುತ್ತಿದ್ದು, ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ ಕೂಡ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ಇದೀಗ ಕೇರಳದ ವಯನಾಡಿನಲ್ಲಿ 100% ವಯಸ್ಕರಿಗೆ ಲಸಿಕೆ ನೀಡಲಾಗಿದೆ. ವಯನಾಡಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಂಪೂರ್ಣವಾಗಿ ಮೊದಲ ಡೋಸ್ ಲಸಿಕೆ ನೀಡಿರುವುದಾಗಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ವಯನಾಡಿನಲ್ಲಿ ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಕೊರೊನಾ ಲಸಿಕೆಯ ಮೊದಲ ಡೋಸ್ ಪೂರೈಕೆಯಾಗಿದೆ. ಎರಡನೇ ಡೋಸ್ ಲಸಿಕೆ ನೀಡಲು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ಜನವರಿ 16ರಿಂದ ದೇಶಾದ್ಯಂತ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದ್ದು, ವಯನಾಡು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ತಮ್ಮ ನಿವಾಸಿಗಳಿಗೆ ಅತಿ ವೇಗವಾಗಿ ಲಸಿಕೆ ನೀಡಿದ ಜಿಲ್ಲೆಗಳಲ್ಲಿ ವಯನಾಡು ಕೂಡ ಗುರುತಿಸಿಕೊಂಡಿತು.ವಯನಾಡಿನಲ್ಲಿ ಕೊರೊನಾ ಸ್ಥಿತಿಗತಿ ಹೀಗಿದೆ: * ವಯನಾಡಿನಲ್ಲಿ ಸದ್ಯ 18 ವರ್ಷ ಮೇಲ್ಪಟ್ಟವರ ಸಂಖ್ಯೆ 6,51,967. * ಐಡಿಎಸ್‌ಪಿ ವರದಿ ಪ್ರಕಾರ ಕಳೆದ ಮೂರು ತಿಂಗಳಿನಲ್ಲಿ 24,529 ಮಂದಿಗೆ ಕೊರೊನಾ ಸೋಂಕು ತಗುಲಿದೆ. * 14648 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. * 1243 ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. * ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಅರ್ಹ ಜನಸಂಖ್ಯೆ : 6,11,430 * ಇದುವರೆಗೂ ಲಸಿಕೆ ಪಡೆದ ಮಂದಿ: ಮೊದಲ ಡೋಸ್: 6,15,729 ಎರಡನೇ ಡೋಸ್: 2,13,277 100.7% ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. ಈಚೆಗೆ ಇತರೆ ಜಿಲ್ಲೆಯ ಜನರು ಕೂಡ ವಯನಾಡಿನಲ್ಲಿ ಲಸಿಕೆ ಪಡೆದಿರುವುದರಿಂದ ಈ ಸಂಖ್ಯೆ 100% ದಾಟಿದೆ. ಲಸಿಕೆ ನೀಡಲು ಉದ್ದೇಶಿತ ಜನಸಂಖ್ಯೆಯಲ್ಲಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 95% ಜನರಿಗೆ ಲಸಿಕೆ ಹಾಕಲಾಗಿದೆ. "ನಾವು ಏನನ್ನು ಸಾಧಿಸಿದ್ದೆವೋ ಅದರಿಂದ ನಮಗೆ ತುಂಬಾ ಸಂತೋಷವಾಗಿದೆ ಮತ್ತು ಸಾಧಿಸಬೇಕಾದ್ದು ಇನ್ನೂ ಇದೆ. ಜನವರಿ 16ರಿಂದ ಲಸಿಕಾ ಅಭಿಯಾನದ ಬಗ್ಗೆ ಪ್ರಧಾನಿ ಘೋಷಣೆ ಮಾಡಿದ್ದರು. ಏಳು ತಿಂಗಳಿನಲ್ಲಿ ಇಡೀ ಅರ್ಹ ಜನಸಂಖ್ಯೆಗೆ ಲಸಿಕೆ ನೀಡುವ ಗುರಿ ಹೊಂದಿದ್ದೆವು. ಏಳು ತಿಂಗಳು ಪೂರೈಸುವ ಒಂದು ದಿನದ ಮುನ್ನವೇ ಆ ಗುರಿಯನ್ನು ಸಾಧಿಸಿದ್ದೇವೆ. ಒಟ್ಟಾರೆ ಜನಸಂಖ್ಯೆಯ 95% ಜನರಿಗೆ ಹಾಗೂ ಅರ್ಹ ಜನಸಂಖ್ಯೆಯ 100.7% ಮಂದಿಗೆ ಕೊರೊನಾ ಲಸಿಕೆ ನೀಡಿದ್ದೇವೆ. ಕೆಲವೇ ಕೆಲವು ಮಂದಿ ಲಸಿಕೆ ಆಯ್ಕೆ ಮಾಡಿಕೊಂಡಿಲ್ಲ. ಈಚೆಗೆ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ ಹಾಗೂ ಕೆಲವರು ಐಸೊಲೇಷನ್‌ನಲ್ಲಿದ್ದಾರೆ. ಹೀಗಾಗಿ ಅವರಿಗೆ ಲಸಿಕೆ ನೀಡಲು ಕೆಲವು ಕಾಲ ಕಾಯಬೇಕಿದೆ" ಎಂದು ವಯನಾಡು ಡಿಸಿ ಡಾ.ಅಡೀಲಾ ಅಬ್ದುಲ್ಲಾ ಮಾಹಿತಿ ನೀಡಿದ್ದಾರೆ.
ಕೇರಳಕ್ಕೆ ಕೇಂದ್ರ ಆರೋಗ್ಯ ಸಚಿವರ ಭೇಟಿ: ಕೇರಳದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದ ಕೊರೊನಾ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಆಗಸ್ಟ್ 16ರಂದು ಭೇಟಿ ನೀಡಲಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಭೇಟಿ ಮಾಡಿ ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಸಲಿದ್ದಾರೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರು ಹಾಗೂ ಆರೋಗ್ಯ ಸಚಿವಾಲಯದ ಇನ್ನಿತರೆ ಅಧಿಕಾರಿಗಳು ಮಾಂಡವಿಯಾ ಅವರೊಂದಿಗೆ ಕೇರಳಕ್ಕೆ ತೆರಳುವುದಾಗಿ ಮೂಲಗಳು ತಿಳಿಸಿವೆ.
ಓಣಂ ಹಬ್ಬ ಹತ್ತಿರವಾಗುತ್ತಿರುವುದರಿಂದ ಕೇರಳ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಎಲ್ಲೆಲ್ಲಿ ವಾರದ ಸೋಂಕಿನ ಪ್ರಮಾಣ 8ಕ್ಕಿಂತ ಹೆಚ್ಚಿದೆಯೋ ಆ ಪಂಚಾಯಿತಿ ಹಾಗೂ ನಗರದ ವಾರ್ಡ್‌ಗಳಲ್ಲಿ ವಿಶೇಷ ಕಠಿಣ ಲಾಕ್‌ಡೌನ್ ನಿಯಮಗಳನ್ನು ಹೇರಲಾಗಿದೆ.