ನವದೆಹಲಿ: ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಭಾನುವಾರ 168 ಮಂದಿಯನ್ನು ದೇಶಕ್ಕೆ ಕರೆತರಲಾಗಿದೆ. ಇದರಲ್ಲಿ 107 ಮಂದಿ ಭಾರತೀಯರಿದ್ದಾರೆ.
ಇಬ್ಬರು ನೇಪಾಳಿ ಪ್ರಜೆಗಳು ಸೇರಿದಂತೆ ಇನ್ನೂ 87 ಮಂದಿಯನ್ನು ತಜಕಿಸ್ತಾನದ ದುಶಾಂಬೆ ಮೂಲಕ ಈಗಾಗಲೇ ನವದೆಹಲಿಗೆ ಕರೆಸಿಕೊಳ್ಳಲಾಗಿದೆ.
ಕಳೆದ ಕೆಲವು ದಿನಗಳಲ್ಲಿ 135 ಮಂದಿ ಭಾರತೀಯರನ್ನು ಅಮೆರಿಕ ಮತ್ತು ನ್ಯಾಟೊ ಪಡೆಗಳ ವಿಮಾನದ ಮೂಲಕ ಅಫ್ಗಾನಿಸ್ತಾನದಿಂದ ತೆರವುಗೊಳಿಸಲಾಗಿದೆ.
ಕಾಬೂಲ್‌ನಿಂದ ದೋಹಾಕ್ಕೆ ಕರೆದೊಯ್ಯಲಾಗಿರುವ ಭಾರತೀಯರು ಅಫ್ಗಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
'ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. 107 ಭಾರತೀಯರು ಸೇರಿದಂತೆ 168 ಮಂದಿಯನ್ನೊಳಗೊಂಡ ವಾಯುಪಡೆ ವಿಮಾನ ಕಾಬೂಲ್‌ನಿಂದ ದೆಹಲಿಗೆ ಬರುತ್ತಿದೆ' ಎಂದು ವಿದೇಶಾಂಗ ಸಚಿವಾಲಯದ ಅರಿಂದಂ ಬಾಗ್ಚಿ ಹೇಳಿದ್ದಾರೆ.
ಭಾರತಕ್ಕೆ ಬರುತ್ತಿರುವವರ ಪೈಕಿ ಪ್ರಮುಖ ಸಿಖ್ ನಾಯಕರೂ ಇದ್ದಾರೆ ಎನ್ನಲಾಗಿದೆ.