ಉಜ್ಜೈನ್: ಉಜ್ಜೈನ್ ನಗರದಲ್ಲಿ ಮೊಹರಮ್ ದಿನದಂದು ಪಾಕ್ ಪರ ಘೋಷಣೆ ಕೂಗಿದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು ನಾಲ್ವರ ವಿರುದ್ಧ ಎನ್‌ಎಸ್‌ಎ ಕಾಯ್ದೆ ಜಾರಿಯಾಗಿದೆ.
ಗೀತಾ ಕಾಲೋನಿಯಲ್ಲಿ ಆ.19 ರಂದು ಪಾಕ್ ಪರ ಘೋಷಣೆ ಕೂಗಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಲವು ಸಂಘಟನೆ ಹಾಗೂ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸಿ ಪಾಕಿಸ್ತಾನದ ಪ್ರತಿಕೃತಿಯನ್ನು ದಹಿಸಿದ್ದ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಉಜ್ಜೈನ್ ನ ಎಸ್ ಪಿ ಸತ್ಯೇಂದ್ರ ಶುಕ್ಲ ಈ ಬಗ್ಗೆ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ, ಆದರೆ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಪೊಲೀಸರ ಶಿಫಾರಸ್ಸಿನ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಎನ್‌ಎಸ್‌ಎ ಜಾರಿಗೊಳಿಸಿದ್ದು, ಘೋಷಣೆ ಕೂಗಿದ ಪ್ರಕರಣದಲ್ಲಿ 10 ಮಂದಿಯನ್ನು ಈ ವರೆಗೂ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಹ ಪ್ರತಿಕ್ರಿಯೆ ನೀಡಿದ್ದು, ತಾಲೀಬಾನ್ ಮಾದರಿಯ ಮನಸ್ಥಿತಿಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಉಜ್ಜೈನ್ ನಲ್ಲಿ ಜಿಲ್ಲಾಡಳಿತ ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಮೆರವಣಿಗೆಯನ್ನು ನಿಷೇಧಿಸಲು ನಿರ್ಧರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ರೀತಿ ಪಾಕ್ ಪರ ಘೋಷಣೆ ಕೂಗಲಾಗಿದೆಯೇ? ಎಂಬ ಪ್ರಶ್ನೆಯನ್ನು ಪೊಲೀಸರು ತಳ್ಳಿಹಾಕಿದ್ದು ಆ ರೀತಿ ಇಲ್ಲ ಎಂದು ಹೇಳಿದ್ದಾರೆ.
124 (a) ರಾಷ್ಟ್ರದ್ರೋಹ ಹಾಗೂ ದಂಗೆಗೆ ಪ್ರಚೋದನೆ ನೀಡುವ 153 ಸೆಕ್ಷನ್ ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.