ಬದಿಯಡ್ಕ: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿ, ಶಿವಳ್ಳಿ ಬ್ರಾಹ್ಮಣ ಮಹಿಳಾ ಸಭಾ ಕಾಸರಗೋಡು ವಲಯ ಹಾಗೂ ಪದ್ಮಪ್ರಿಯ ಮಹಿಳಾ ಭಜನಾ ಮಂಡಳಿ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳಗೌರಿ ವ್ರತ ಪೂಜೆ ಹಾಗೂ ಪದ್ಮಪ್ರಿಯ ಮಹಿಳಾ ಭಜನಾ ಮಂಡಳಿ ಕಾಸರಗೋಡು ಇದರ ದಶಮಾನೋತ್ಸವ ಕಾರ್ಯಕ್ರಮ ಆ.10 ರಂದು ಶ್ರೀಮದ್ ಎಡನೀರು ಮಠದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಚಂಡಿಕಾ ಯಾಗಾರಂಭ, 9.30ಕ್ಕೆ ಮಂಗಳಗೌರಿ ವ್ರತ ಪೂಜಾರಂಭ, ಮಧ್ಯಾಹ್ನ 12ಕ್ಕೆ ಮಂಗಳಗೌರಿ ಪೂಜೆಯ ಮಹಾಮಂಗಳಾರತಿ, 12.30 ರಿಂದ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ನಡೆಯಲಿದೆ.
ಅಪರಾಹ್ನ 2.30ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಶಿವಳ್ಳಿ ಬ್ರಾಹ್ಮಣ ಸಭಾದ ಕಾಸರಗೋಡು ವಲಯಾಧ್ಯಕ್ಷ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಣಿಯತ್ತಾಯ ವಿಷ್ಣು ಆಸ್ರ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶ್ರೀಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್ತು ಅಧ್ಯಕ್ಷ ಜಯರಾಮ ನೆಲ್ಲಿತ್ತಾಯ, ಶಿವಳ್ಳಿ ಬ್ರಾಹ್ಮಣ ಸಭಾ ಕೇಂದ್ರ ಸಮಿತಿ ಅಧ್ಯಕ್ಷೆ ಪ್ರೇಮಾ ಬಾರಿತ್ತಾಯ, ಶ್ರೀಎಡನೀರು ಸಂಸ್ಥಾನದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ದಾಸ ಸಾಹಿತ್ಯ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ವಸಂತಿ ದೇವಪೂಜಿತ್ತಾಯ ಉಪಸ್ಥಿತರಿದ್ದು ಶುಭಹಾರೈಸುವರು. ಪದ್ಮಪ್ರಿಯ ಮಹಿಳಾ ಭಜನಾ ಮಂಡಳಿ ವತಿಯಿಂದ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಗುರುವಂದನೆ ಕಾರ್ಯಕ್ರಮ ಈ ಸಂದರ್ಭ ನಡೆಯಲಿದೆ. ಕಣ್ಣೂರು ವಿಶ್ವವವಿಆನಿಲಯದಿಂದ ಸ್ತ್ರೀ ಪ್ರಜ್ಞೆ ಎಂಬ ವಿಷಯದ ಅಧ್ಯಯನ ಪ್ರಬಂಧಕ್ಕೆ ಇತ್ತೀಚ ಡಾಕ್ಟರೇಟ್ ಪಡೆದ ಸವಿತಾ ಬಿ ಅವರನ್ನು ಅಭಿನಂದಿಸಲಾಗುವುದು. ಉಳಿಯತ್ತಾಯ ವಿಷ್ಣು ಆಸ್ರ, ಪ್ರಕಾಶ್ ಕಾವು ಪಟ್ಟೇರಿ ಹಾಗೂ ರಾಮಪ್ರಸಾದ್ ಕಾಸರಗೋಡು ಇವರಿಗೆ ವಿವಿಧ ವಲಯದ ಸಾಧನೆಗಾಗಿ ಗೌರವಾರ್ಪಣೆ ನಡೆಯಲಿದೆ. ಏತಡ್ಕ, ಮುಳ್ಳೇರಿಯ, ಕಾಞಂಗಾಡ್, ಕಳತ್ತೂರು ಹಾಗೂ ಎಡನೀರು ತಂಡಗಳ ಭಜನಾ ಸಂಕೀರ್ತನೆ ನಡೆಯಲಿದೆ.