ಬಿಕನೇರ್: ಟ್ರಕ್ ಹಾಗೂ ಕ್ರೂಸರ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 11 ಮಂದಿ ದುರ್ಮರಣವನ್ನಪ್ಪಿರುವ ಘಟನೆ ನಾಗೌರ್‌ನಲ್ಲಿ ಮಂಗಳವಾರ ನಡೆದಿದೆ.
ದುರಂತದಲ್ಲಿ 7 ಮಂದಿ ಗಾಯಗೊಂಡಿದ್ದು, ಬಿಕನೇರ್‌ನ ನೋಖಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗೌರ್‌ನ ಬಿಕನೇರ್-ಜೋಧ್‌ಪುರ ಹೆದ್ದಾರಿಯಲ್ಲಿ ನಡೆದಿರುವ ಅಪಘಾತದಲ್ಲಿ ಸ್ಥಳದಲ್ಲೇ 8 ಮಂದಿ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೂವರು ಅಸುನೀಗಿದರು.
ಕ್ರೂಸರ್‌ನಲ್ಲಿದ್ದ ಎಲ್ಲರೂ ಮಧ್ಯಪ್ರದೇಶದ ಸಜ್ಜನಖೇಡವ್‌ನ ದೌಲತ್‌ಪುರ ನಿವಾಸಿಗಳು ಎನ್ನಲಾಗಿದೆ. ದುರಂತದ ಬಳಿಕ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೋಖಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.