ವಾಷಿಂಗ್ ಟನ್: ಎಸ್ಎ ಟಿ ಹಾಗೂ ಎಸಿಟಿ ಗುಣಮಟ್ಟದ ಪರೀಕ್ಷೆಗಳಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿರುವ 11 ವರ್ಷದ ಭಾರತೀಯ ಅಮೆರಿಕನ್ ಬಾಲಕಿ ನತಾಶಾ ಪೆರಿ ಅವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿನಿಯೆಂದು ಘೋಷಿಸಲಾಗಿದೆ.
ಹಲವು ಕಾಲೇಜುಗಳಲ್ಲಿ ಪ್ರವೇಶ ನೀಡುವುದಕ್ಕಾಗಿ ವಿದ್ವತ್ ಮೌಲ್ಯಮಾಪನ ಪರೀಕ್ಷೆ (SAT) ಮತ್ತು ಅಮೇರಿಕನ್ ಕಾಲೇಜು ಪರೀಕ್ಷೆ (ACT)ಗಳನ್ನು ನಡೆಸಲಾಗುತ್ತದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ಕಂಪನಿಗಳು ಹಾಗೂ ಎನ್ ಜಿಒ ಗಳೂ ಸಹ ಈ ರೀತಿಯ ಪರೀಕ್ಷೆಗಳ ಮೂಲಕ ಸ್ಕಾಲರ್ಶಿಪ್ ನೀಡುತ್ತವೆ. ಕಾಲೇಜು ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಎಸ್‌ಎಟಿ ಅಥವಾ ಎಸಿಟಿ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ನ್ಯೂ ಜೆರ್ಸಿಯ ಥೇಲ್ಮಾ ಎಲ್ ಸ್ಯಾಂಡ್ಮೆರಿಯರ್ ಎಲಿಮೆಂಟ್ರಿ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಪೆರಿ ಎಸ್‌ಎಟಿ, ಎಸಿಟಿ ಪರೀಕ್ಷೆಗಳಿಗೆ ಹಾಜರಾಗಿದ್ದರು. ಜಾನ್ಸ್ ಹಾಪ್ಕಿನ್ಸ್ ಕೇಂದ್ರದಲ್ಲಿ ಟ್ಯಾಲೆಂಟೆಡ್ ಯೂತ್ ಟ್ಯಾಲೆಂಟ್ (ವಿಟಿವೈ)ಸರ್ಚ್ ನ ಭಾಗವಾಗಿ ತೆಗೆದುಕೊಂಡಿದ್ದ ಮೌಲ್ಯಮಾಪನದಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿದ್ದರು.
2020-21 ಸಿಟಿವೈ ಟ್ಯಾಲೆಂಟ್ ಸರ್ಚ್ ನಲ್ಲಿ 84 ದೇಶಗಳಿಂಡ ಭಾಗವಹಿಸಿದ್ದ 19,000 ವಿದ್ಯಾರ್ಥಿಗಳೊಂದಿಗೆ ಗ್ರೇಡ್ 5 ನಲ್ಲಿದ್ದ ನತಾಶಾ ಪೆರಿ ಭಾಗವಹಿಸಿದ್ದರು. ಸಿಟಿವೈ ನಲ್ಲಿ ವಿದ್ಯಾರ್ಥಿಯ ಗ್ರೇಡ್ ಗಿಂತಲೂ ಹೆಚ್ಚಿನ ಬೌದ್ಧಿಕ ಮಟ್ಟದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಗ್ರೇಡ್ 8 ಕ್ಕೂ ಮೇಲ್ಪಟ್ಟ ಬೌದ್ಧಿಕ ಕ್ಷಮೆತೆಯನ್ನು ಪೆರಿ ಪ್ರದರ್ಶಿಸಿದ್ದಾರೆ.