ನವದೆಹಲಿ: ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ಶೀಘ್ರದಲ್ಲೇ ನಡೆಯಲಿದೆಯೇ ಎಂಬ ಕುತೂಹಲವೊಂದು ಇದೀಗ ಮೂಡಿದೆ. ಏಕೆಂದರೆ ಹನ್ನೊಂದು ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಜಾತಿ ಆಧಾರಿತ ಜನಗಣತಿ ನಡೆಸುವಂತೆ ಒತ್ತಾಯಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ 11 ರಾಜಕೀಯ ಪಕ್ಷಗಳ ಮುಖಂಡರ ನಿಯೋಗವೊಂದು ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು, ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ಕೂಡ ಈ ನಿಯೋಗದಲ್ಲಿದ್ದರು.
ಬಿಹಾರ ವಿಧಾನಸಭೆ ಅಧಿವೇಶನದಲ್ಲಿ ಜಾತಿ ಆಧಾರಿತ ಜನಗಣತಿ ಕುರಿತು ಎರಡೆರಡು ಸಲ ಹೇಗೆ ನಿರ್ಣಯ ಕೈಗೊಳ್ಳಲಾಯಿತು ಎಂಬುದನ್ನು ಮೋದಿಯವರಿಗೆ ವಿವರಿಸಲಾಗಿದ್ದು, ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವರಿಕೆ ಮಾಡಲಾಯಿತು. ಬಿಹಾರದ ಜನತೆ ಮಾತ್ರವಲ್ಲ, ದೇಶದ ಬಹುತೇಕ ಜನತೆ ಈ ಕುರಿತು ಒಲವು ಹೊಂದಿದ್ದಾರೆ ಎಂದು ತಿಳಿಸಲಾಯಿತು ಎಂಬುದಾಗಿ ನಿತೀಶ್ಕುಮಾರ್ ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, 'ನಮ್ಮ ನಿಯೋಗ ಪ್ರಧಾನಿಯವರನ್ನು ಭೇಟಿಯಾಗಿ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತವೂ ಜಾತಿ ಆಧಾರಿತ ಜನಗಣತಿ ಅಗತ್ಯವಿದೆ ಎಂದು ವಿವರಿಸಲಾಯಿತು. ನಾವು ಇನ್ನು ಆ ಕುರಿತ ನಿರ್ಣಯಕ್ಕೆ ಕಾಯುತ್ತಿದ್ದೇವೆ' ಎಂದು ತಿಳಿಸಿದ್ದಾರೆ.