HEALTH TIPS

ಕಾಬೂಲ್‌ ವಿಧ್ವಂಸದ ಐಸಿಸ್‌ ಬಣದಲ್ಲಿ 14 ಕೇರಳಿಯರು, ದೇಶಕ್ಕೆ ಮರಳಲು ಉಗ್ರರ ಕಾತರ

                  ನವದೆಹಲಿಅಫ್ಘಾನಿಸ್ತಾನದ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ದಾಳಿ ನಡೆಸಿದ ಐಸಿಸ್‌-ಕೆ ಉಗ್ರ ಸಂಘಟನೆಯಲ್ಲಿ ಕೇರಳದ 14 ಉಗ್ರರು ಇದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

                  ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಉಗ್ರರನ್ನು ತಾಲಿಬಾನ್‌ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಆ ಪೈಕಿ ಕೇರಳದ 14 ಜನರೂ ಸೇರಿದ್ದಾರೆ. ಈ ವಿಷವರ್ತುಲದಿಂದ ಬಿಡಿಸಿಕೊಂಡ ಕೇರಳದ ಉಗ್ರನೊಬ್ಬ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದು, ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾನೆ. ರಾಜ್ಯದ ಇನ್ನೂ 13 ಯುವಕರು ಐಸಿಸ್‌-ಕೆ ಬಣದಲ್ಲಿಯೇ ಇದ್ದಾರೆ ಎಂದು ಈತ ಮಾಹಿತಿ ನೀಡಿದ್ದಾನೆ.
                   2014ರಲ್ಲಿ ಸಿರಿಯಾದಲ್ಲಿ ಇಸ್ಲಾಂ ಹುಸಿ ಕ್ರಾಂತಿ ಸೃಷ್ಟಿಯಾದಾಗ ಮಲಪ್ಪುರಂ, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಅನೇಕ ಮುಸ್ಲಿಂ ಯುವಕರು ಪಶ್ಚಿಮ ಏಷ್ಯಾದಲ್ಲಿನ ಜಿಹಾದಿ ಗುಂಪುಗಳನ್ನು ಸೇರಿದ್ದರು. ಅಲ್ಲಿಂದ ಕೆಲವು ಯುವಕರು ಆಫ್ಘನ್‌ನ ನಂಗರ್ಹಾರ್‌ ಪ್ರಾಂತಕ್ಕೆ ಬಂದು ಐಸಿಸ್‌-ಕೆ ಬಣ ಸೇರಿದ್ದರು. ಈಗ ಇವರ ಸ್ಥಿತಿ ಅಯೋಮಯವಾಗಿದೆ.
''ತಾಲಿಬಾನಿಗಳು ಅಧಿಕಾರ ಹಿಡಿದರೆ ಇವರು ಅವರೊಂದಿಗೆ ಶಾಮೀಲಾಗಬೇಕು, ಇಲ್ಲವೇ ಹತರಾಗಬೇಕು. ಶಾಮೀಲಾದರೂ ಕೂಡ ವಿದೇಶದಿಂದ ಹೋದ ಉಗ್ರರು ಎರಡನೇ ದರ್ಜೆಯ ಸವಲತ್ತನ್ನು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೇರಳದ ಯುವಕರ ಸ್ಥಿತಿ ತೀರ ಗಂಭೀರವಾಗಿದೆ,'' ಎಂದು ಗುಪ್ತಚರ ಮಾಹಿತಿ ಆಧರಿಸಿ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
                                        ತೆರೆಮರೆಯಲ್ಲೇ ಉಳಿದ ಸೂತ್ರಧಾರ
               ಅಮೆರಿಕದದೈತ್ಯ ಶಕ್ತಿಯ ಎದುರು ತಂತ್ರ ಮತ್ತು ಕಾದಾಟದ ಬಲ ಬಳಸಿ ತಾಲಿಬಾನ್‌ ಅಫ್ಘಾನಿಸ್ತಾನದ ಅಧಿಕಾರ ಸೂತ್ರ ಹಿಡಿದಿದೆ. ಈ ಉಗ್ರ ಸಂಘಟನೆಯ ದುಸ್ಸಾಹಸ ಯಾತ್ರೆಯ ಹಿಂದೆ ಹಿಬತುಲ್ಲಾಅಖುಂಡ್‌ಝಾದ ಎಂಬ ತಂತ್ರಗಾರನ ಕೈಚಳಕ ಕೆಲಸ ಮಾಡಿದೆ. ಅಖುಂಢಝಾದ ಈಗಿನ ತಾಲಿಬಾನ್‌ ಸಂಘಟನೆಯ ವರಿಷ್ಠ ನಾಯಕ. ಆಫ್ಘನ್‌ನಲ್ಲಿಇಷ್ಟೆಲ್ಲ ವಿದ್ಯಮಾನ ನಡೆಯುತ್ತಿದ್ದರೂ ಈತ ಎಲ್ಲಿದ್ದಾನೆ ಎನ್ನುವುದು ಯಾರಿಗೂ ತಿಳಿದಿಲ್ಲ. ಇಪ್ಪತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್ಲಾ ಸಣ್ಣಪುಟ್ಟ ನಾಯಕರು ಕಾಬೂಲ್‌ಗೆ ಹಿಂದುರಿಗಿ ಬಂದಿದ್ದಾರೆ. ಆದರೆ, ಮುಖ್ಯಸ್ಥ ಮಾತ್ರ ಇನ್ನೂ ತೆರೆಮರೆಯಲ್ಲಿಯೇ ಉಳಿದು ಆಟ ಆಡಿಸುತ್ತಿದ್ದಾನೆ.
             ಸರಕಾರ ರಚನೆಯ ಎಲ್ಲಾ ಕಸರತ್ತು ನಿರ್ವಹಿಸುತ್ತಿರುವುದು ಬರದಾರ್‌ ಎಂಬ ಉಪ ಮುಖ್ಯಸ್ಥ. ಅಖುಂಡ್‌ಝಾದ ತೆರೆಮರೆಯಲ್ಲಿದ್ದೇ ನಿತ್ಯದ ಆಗುಹೋಗುಗಳನ್ನು ನಿರ್ದೇಶಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈತ ಈಗ ಹೇಗಿದ್ದಾನೆ ಎನ್ನುವುದು ಕೂಡ ಯಾರಿಗೂ ತಿಳಿದಿಲ್ಲ. ಹಿಂದೊಮ್ಮೆ ಬಿಡುಗಡೆ ಮಾಡಿದ ಭಾವಚಿತ್ರವೇ ಇವತ್ತಿಗೂ ಹರಿದಾಡುತ್ತಿದೆ. ಈ ಬಗ್ಗೆ ಅಲ್ಲಿನ ಜನರಲ್ಲಿ ಮೂಡಿದ ಕುತೂಹಲಕ್ಕೆ, ''ಅಲ್ಲಾನ ದಯಯಿಂದ ಶೀಘ್ರವೇ ನೀವು ಅವರನ್ನು ನೋಡುವಿರಿ,'' ಎಂದು ತಾಲಿಬಾನ್‌ ವಕ್ತಾರ ಜಬಿಹುಲ್ಲಾ ಮುಜಾಹೀದ್‌ ಹೇಳಿದ್ದಾರೆ.
            ಮುಲ್ಲಾಓಮರ್‌ ಹತನಾದ ಬಳಿಕ ಮುಂಚೂಣಿಗೆ ಬಂದ ಅಖುಂಡ್‌ಝಾದ 2016ರಲ್ಲಿ ತಾಲಿಬಾನ್‌ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ. ಅಲ್ಲಿಂದ ಇಲ್ಲಿವರೆಗೆ ಆತ ಅಸೀಮ ತಂತ್ರಗಾರಿಕೆ ಮೂಲಕ ಪ್ರಶ್ನಾತೀತ ಉಗ್ರ ನಾಯಕನಾಗಿ ಬೆಳೆದಿದ್ದಾನೆ. ಈತ ಕಂದಹಾರ್‌ನ ರಹಸ್ಯ ನೆಲೆಯಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ
                             ಸರಕಾರಿ ವಾಹನ, ಶಸ್ತ್ರಾಸ್ತ್ರ ಒಪ್ಪಿಸಲು ಆದೇಶ
            ಆಡಳಿತ ಬದಲಾವಣೆಯೊಂದಿಗೆ ಚದುರಿ ಹೋಗಿದ್ದ ಸರಕಾರಿ ವಾಹನ, ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತಿತರೆ ಸಾಧನ ಸಲಕರಣೆಗಳನ್ನು ಮರಳಿ ಒಟ್ಟುಗೂಡಿಸಲು ತಾಲಿಬಾನ್‌ ಪ್ರಯತ್ನ ಆರಂಭಿಸಿದೆ. ''ಸರಕಾರದ ಎಲ್ಲಾ ವಾಹನ, ಶಸ್ತ್ರಾಸ್ತ್ರಗಳನ್ನು ಒಂದು ವಾರದೊಳಗೆ ಸಂಬಂಧಪಟ್ಟ ಇಲಾಖೆಗಳಿಗೆ ತಂದು ಒಪ್ಪಿಸಿ,'' ಎಂದು ಈ ಹಿಂದಿನ ಆಡಳಿತಾವಧಿಯ ಸಿಬ್ಬಂದಿಗೆ ಆದೇಶ ನೀಡಲಾಗಿದೆ. ಆದೇಶ ಉಲ್ಲಂಘಿಸಿ ಸರಕಾರದ ಸ್ವತ್ತುಗಳನ್ನು ಬಳಕೆ ಮಾಡಿಕೊಂಡರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ,'' ಎಂದು ಉಗ್ರ ಸಂಘಟನೆಯ ವಕ್ತಾರ ಜಬಿಹುಲ್ಲಾ ಮುಜಾಹೀದ್‌ ಎಚ್ಚರಿಸಿದ್ದಾರೆ.
                              ಹಕ್ಕಾನಿ ಉಗ್ರರ ಕೈಗೆ ಕಾಬೂಲ್‌ ಭದ್ರತೆ
            ಅಮೆರಿಕದ ಘೋಷಿತ ಉಗ್ರ ಸಂಘಟನೆ 'ಹಕ್ಕಾನಿ ಉಗ್ರ ನೆಟ್‌ವರ್ಕ್' ಈಗ ಕಾಬೂಲ್‌ ಅನ್ನು ಕಾವಲು ಕಾಯುವ ಜವಾಬ್ದಾರಿಗೆ ನಿಯೋಜನೆಗೊಂಡಿದೆ. ಹಿಂಸಾಚಾರವನ್ನು ಹಿಂಸಾಚಾರದ ಮೂಲಕವೇ ಹತ್ತಿಕ್ಕಲು ಹೊರಟಿರುವ ತಾಲಿಬಾನ್‌, ತುರ್ತಾಗಿ ಕಾಬೂಲ್‌ ದುಸ್ಥಿತಿಯನ್ನು ನಿಯಂತ್ರಿಸುವ ಒತ್ತಡಕ್ಕೆ ಸಿಲುಕಿದೆ. ಈ ಹೊಣೆಯನ್ನು ಹಕ್ಕಾನಿ ಬಣದ ಉಗ್ರರು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ತೀರ್ಮಾನಿಸಿರುವ ತಾಲಿಬಾನಿಗಳು ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ಈ ಸಂಘಟನೆಯನ್ನು ಅಮೆರಿಕ ಉಗ್ರ ಪಟ್ಟಿಗೆ ಸೇರಿಸಿ ಘೋಷಣೆ ಮಾಡಿತ್ತು. ಇದರ ಮುಖ್ಯಸ್ಥ ಖಲೀಲ್‌ ಹಕ್ಕಾನಿ ಘೋರ ಪಾತಕಿಯಾಗಿದ್ದು, ಈತನ ತಲೆಗೆ ಅಮೆರಿಕ 50 ಲಕ್ಷ ಡಾಲರ್‌ ಬಹುಮಾನ ಘೋಷಿಸಿದೆ. ಆದರೆ, ತಾಲಿಬಾನ್‌ ಮತ್ತು ಹಕ್ಕಾನಿ ಎರಡೂ ಪ್ರತ್ಯೇಕ ಸಂಘಟನೆಗಳು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
                                  ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ
               ಆಫ್ಘನ್‌ನಲ್ಲಿಆಹಾರ ಮತ್ತು ಹಣದ ಕೊರತೆ ಹೆಚ್ಚಿದೆ. ನಗದು ಡ್ರಾ ಮಾಡಿಸಿಕೊಳ್ಳಲು ಜನ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ನಗದಿನ ಕೊರತೆಯಿಂದ ರೋಸಿ ಹೋಗಿರುವ ನೂರಾರು ದೇಶವಾಸಿಗಳು ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಸರಕಾರಿ ನೌಕರರೂ ಪಾಲ್ಗೊಂಡಿದ್ದರು. ಕಳೆದ ಆರು ತಿಂಗಳಿನಿಂದ ನಮಗೆ ಸಂಬಳವೇ ಇಲ್ಲ. ಮೂರು ದಿನಗಳ ಹಿಂದೆ ಬ್ಯಾಂಕ್‌ಗಳು ತೆರೆದರೂ ನಗದು ಪಡೆಯಲು ಆಗಿಲ್ಲ. ಎಟಿಎಂಗಳಲ್ಲೂ 24 ಗಂಟೆಯಲ್ಲಿ ಕೇವಲ 200 ಡಾಲರ್‌ ಮಾತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
                                   ನಂಬಿಕೆ ಕಳೆದುಕೊಂಡ ಆಫ್ಘನ್ನರು
                 ಆಫ್ಘನ್‌ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದೆ. ಈ ಮೊದಲು ಸರಕಾರದ ಬಜೆಟ್‌ಗೆ ಶೇ.75ರಷ್ಟು ಹೊರದೇಶಗಳ ನೆರವು ಸಿಗುತ್ತಿತ್ತು ಎಂಬುದು ಗಮನಾರ್ಹ. ಅಂತಾರಾಷ್ಟ್ರೀಯ ಸಮುದಾಯದ ಜತೆ ನಾವು ಉತ್ತಮ ನಂಟನ್ನು ಹೊಂದಲು ಬಯಸುತ್ತೇವೆ. ಹಿಂದಿನ ನಮ್ಮ ಆಡಳಿತಕ್ಕಿಂತ ಭಿನ್ನವಾಗಿ ಈ ಬಾರಿ ಉದಾರವಾದಿ ಇಸ್ಲಾಮಿಕ್‌ ಆಡಳಿತವನ್ನು ನೀಡುತ್ತೇವೆ ಎಂದು ತಾಲಿಬಾನ್‌ಗಳು ವಚನ ನೀಡಿದ್ದಾರೆ. ಆದರೆ ಅವರ ನಡವಳಿಕೆ ಕುರಿತು ಬೇರೆಯವರಿಗೆ ಇರಲಿ, ಸ್ವತಃ ಆಫ್ಘನ್ನರಿಗೆ ಇನ್ನೂ ನಂಬಿಕೆ ಬಂದಿಲ್ಲ. ವಿದೇಶಿ ನೆರವು ಬತ್ತಿರುವುದರಿಂದ ಬಿಕ್ಕಟ್ಟು ಉಲ್ಬಣಿಸಿದೆ.
                                        ವಿಶ್ವಸಂಸ್ಥೆ ಕಾಳಜಿ
           ಕ್ಷೋಭೆ ಮತ್ತು ಬರಗಾಲದಿಂದ 70 ಲಕ್ಷ ಆಫ್ಘನ್ನರ ಬದುಕು ದುರ್ಬರಗೊಂಡಿದೆ. ಕೊರೊನಾ ಕೂಡ ಅವರನ್ನು ಇನ್ನಷ್ಟು ಕಂಗೆಡೆಸಿದೆ. ವಿಶ್ವಸಂಸ್ಥೆ ಇತ್ತೀಚೆಗೆ, ಮೂವರಲ್ಲಿ ಒಬ್ಬರಿಗೆ ಆಹಾರವನ್ನು ಒದಗಿಸಬೇಕಾಗಿದೆ ಎಂದು ಪ್ರತಿಪಾದಿಸಿತ್ತು. ಕಳೆದ ಬಾರಿಗಿಂತ ಈ ಸಲ ಶೇ. 20ರಷ್ಟು ಫಸಲು ಕಡಿಮೆಯಾಗುತ್ತದೆ. ಒಂದು ಲಕ್ಷದ ಹತ್ತು ಸಾವಿರ ರೈತ ಕುಟುಂಬಗಳಿಗೆ ತಕ್ಷಣ ನೆರವು ನೀಡಬೇಕು ಎಂದು ವಿಶ್ವಸಂಸ್ಥೆ ಕಾಳಜಿ ತೋರಿದೆ. ''ನಮ್ಮ ಪ್ರಜೆಗಳನ್ನು ನಮ್ಮ ದೇಶಕ್ಕೆ ಕರೆದುಕೊಂಡು ಬರುವ ಕಾರ್ಯಾಚರಣೆ ಮುಗಿದಿದೆ. ಆದರೆ ವಿಶ್ವಸಂಸ್ಥೆ ಜತೆ ನವು ಕೈ ಜೋಡಿಸುತ್ತೇವೆ. ಆಫ್ಘನ್ನರಿಗೆ ಅಗತ್ಯ ನೆರವು ಒದಗಿಸುತ್ತೇವೆ. ಅದರಲ್ಲೂಹೆಂಗಸರು ಮತ್ತು ಮಕ್ಕಳ ಹಿತ ಕಾಪಾಡುವುದು ನಮ್ಮ ಕರ್ತವ್ಯ,'' ಎಂದು ಇಟಲಿ ವಿದೇಶಾಂಗ ಸಚಿವ ಲುಹಿ ದಿ ಮೈಯೊ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries