ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ, ಸಪ್ಟೆಂಬರ್ 15ರವರೆಗೆ ಯುಜಿ, ಪಿಜಿ ತರಗತಿ ಆರಂಭಿಸದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಮಾಡಿದ್ದಾರೆ.
ಸೆಪ್ಟೆಂಬರ್ 15ರವರೆಗೆ ಸ್ನಾತಕ, ಸ್ನಾತಕೋತ್ತರ ತರಗತಿ ಆರಂಭಿಸದಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಆನ್‍ಲೈನ್ ಮೂಲಕವಷ್ಟೇ ತರಗತಿ ನಡೆಸುವಂತೆ ಕಾಲೇಜು, ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಸೆಪ್ಟೆಂಬರ್ 15ರ ಒಳಗೆ ಕಡಿಮೆಯಾದರೆ, ಮತ್ತೊಮ್ಮೆ ಸಭೆ ಮಾಡಿ ಕಾಲೇಜು ಆರಂಭದ ಬಗ್ಗೆ ನಿರ್ಧಾರ ಮಾಡುವುದಾಗಿ ಶಿಕ್ಷಣ ಇಲಾಖೆಗೆ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಆದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಅವಶ್ಯಕವಾಗಿರೋದರಿಂದ ಕಾಲೇಜಿನ ಲ್ಯಾಬ್ ನಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಚ್ ಸಿಸ್ಟಮ್ ಮಾಡಿ ತರಗತಿ ಗಳನ್ನು ಮಾಡಬಹುದು. ಇದಕ್ಕಾಗಿ ಕಡ್ಡಾಯವಾಗಿ ಕೊವಿಡ್ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವೇ ತರಗತಿ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಎಲ್ಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆಯನ್ನು ಪಡೆದಿರಬೇಕು. ಲಸಿಕೆ ಪಡೆಯದ ಅಥವಾ ಲಸಿಕೆ ಸಿಗದೇ ಇದ್ದವರು ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆದರೆ ಪಿಯು ಕಾಲೇಜುಗಳನ್ನು ಆಗಸ್ಟ್ 30ರಿಂದ ಆರಂಭಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧಾರ ಮಾಡಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳ ಅವಶ್ಯಕತೆ ಇರೋದರಿಂದ ಪಿಯು ಕಾಲೇಜುಗಳನ್ನು ತೆರೆಯಲು ಜಿಲ್ಲಾಡಳಿತ ಸಮ್ಮತಿ ಸೂಚಿಸಿದೆ.
ಬಹುತೇಕ ಪಿಯು ಕಾಲೇಜುಗಳಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಬರುವುದರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆಗಳು ಕಡಿಮೆ ಇದೆ. ಹೀಗಾಗಿ ಪಿಯು ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ. ಹೇಳಿದ್ದಾರೆ.
ಇನ್ನು ಜಿಲ್ಲೆಯಲ್ಲಿ 9 ಹಾಗೂ 10ನೇ ತರಗತಿಗಳ ಭೌತಿಕ ತರಗತಿಗಳ ಶಾಲಾ ಪ್ರಾರಂಭವೂ ಮುಂದೂಡಿಕೆಯಾಗಿದೆ. ಶಾಲಾ ಪ್ರಾರಂಭದ ದಿನಾಂಕವನ್ನು ಮುಂದೆ ಪ್ರಕಟಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ವಾರಾಂತ್ಯದ ಕರ್ಪ್ಯೂ ವೇಳೆ ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದ್ದು, ಆಗಸ್ಟ್ 28ರಂದು ಇದಕ್ಕೆ ಬೇಕಾದ ಎಲ್ಲಾ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.