ನವದೆಹಲಿ: ದೆಹಲಿಯಲ್ಲಿ ಕೋವಿಡ್-19 ಅಬ್ಬರ ಕಡಿಮೆಯಾಗುತ್ತಿದ್ದು ಸತತ 3 ನೇ ದಿನವೂ ಶೂನ್ಯ ಸಾವಿನ ಸಂಖ್ಯೆ ದಾಖಲಾಗಿದೆ. ಆ.22 ರಂದು 24 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.0.04 ರಷ್ಟಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ.
ಎರಡನೇ ಅಲೆ ಪ್ರಾರಂಭವಾದಾಗಿನಿಂದಲೂ ದೆಹಲಿಯಲ್ಲಿ ಇದು 13 ನೇ ಬಾರಿಗೆ ದಿನವೊಂದರಲ್ಲಿ ಶೂನ್ಯ ಸಾವಿನ ಪ್ರಮಾಣ ದಾಖಲಾಗಿದೆ. ಹೊಸ ಪ್ರಕರಣಗಳ ಮೂಲಕ ದೆಹಲಿಯಲ್ಲಿ ಒಟ್ಟಾರೆ 14,37,317 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 14.11 ಲಕ್ಷ ರೋಗಿಗಳು ಚೇತರಿಕೆ ಕಂಡಿದ್ದರೆ 25,079 ಮಂದಿ ಸಾವನ್ನಪ್ಪಿದ್ದಾರೆ.
ಈ ತಿಂಗಳಲ್ಲಿ 26 ಮಂದಿ ಸಾವನ್ನಪ್ಪಿದ್ದು, ಜುಲೈ 31 ರ ಡೇಟಾ ಪ್ರಕಾರ 25,053 ಸಾವುಗಳು ಸಂಭವಿಸಿವೆ. ಶನಿವಾರದಂದು 17 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಕಳೆದ ವರ್ಷ ಏ.15 ರ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಸಂಖ್ಯೆ ವರದಿಯಾಗಿದೆ. ಇದಕ್ಕೂ ಮುನ್ನ ಶುಕ್ರವಾರದಂದು ದೆಹಲಿಯಲ್ಲಿ 57 ಪ್ರಕರಣಗಳು ವರದಿಯಾಗುವ ಮೂಲಕ ಪಾಸಿಟಿವಿಟಿ ರೇಟ್ 0.08 ರಷ್ಟು ದಾಖಲಾಗಿದೆ.
ದೆಹಲಿಯಲ್ಲಿ ಈಗ 398 ಸಕ್ರಿಯ ಕೋವಿಡ್-19 ಸೋಂಕು ಪ್ರಕರಣಗಳಿದ್ದು, ಈ ಪೈಕಿ 129 ಹೋಮ್ ಐಸೊಲೇಷನ್ ನಲ್ಲಿದ್ದಾರೆ. ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 236 ರಲ್ಲಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ದಾಖಲಾಗಿದೆ.