ನವದೆಹಲಿ: 1993ರ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಇತರ ಸರಣಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ವರ್ಷಗಳಿಂದ ಜೈಲಿನಲ್ಲಿರುವ ಆರೋಪಿ ಮೇಲೆ ಆರೋಪಪಟ್ಟಿ ಸಲ್ಲಿಸದಿರುವ ಕುರಿತು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 'ಆತನನ್ನು ಶಿಕ್ಷಿಸಿ ಅಥವಾ ದೋಷಮುಕ್ತಗೊಳಿಸಿ'ಎಂದು ಹೇಳಿದೆ.
ತ್ವರಿತ ವಿಚಾರಣೆಯ ಹಕ್ಕನ್ನು ಒತ್ತಿ ಹೇಳಿರುವ ಉನ್ನತ ನ್ಯಾಯಾಲಯವು, ಆರೋಪಿ ಹಮೀರ್ ಉಯಿ ಉದ್ದಿನ್ ವಿರುದ್ಧ ಏಕೆ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ ಎಂಬ ಬಗ್ಗೆ ವರದಿ ನೀಡುವಂತೆ ಅಜ್ಮೀರ್‌ನ ಟಾಡಾ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಚಿಸಿದ್ದು, ಎರಡು ವಾರಗಳ ಗಡುವು ನೀಡಿದೆ.
ವಿಚಾರಣೆಯ ಸಮಯದಲ್ಲಿ ಆರೋಪಿ ಹಮೀರ್ ಉಯಿ ಉದ್ದಿನ್ ಪರ ಹಾಜರಾದ ವಕೀಲ ಶೋಯೆಬ್ ಆಲಂ, ಅರ್ಜಿದಾರರು 2010 ರಿಂದ ಬಂಧನದಲ್ಲಿದ್ದಾರೆ. ಆದರೆ, ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ವಿಚಾರಣೆಯೇ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದರು. ಆರೋಪಿಯನ್ನು ವಿಚಾರಣೆ ಇಲ್ಲದೆ ಅನಿರ್ದಿಷ್ಟಾವಧಿಗೆ ಬಂಧಿಸಿಡುವುದು ಅನುಚ್ಛೇದ 21 ರ ಅಡಿಯಲ್ಲಿ ವ್ಯಕ್ತಿಯ ಹಕ್ಕುಗಳ ದುರುಪಯೋಗವಾಗಿದೆ ಎಂದು ಅವರು ವಾದಿಸಿದರು.
ಮುಂದಿನ ದಿನಗಳಲ್ಲಿ ವಿಚಾರಣೆಯ ಮುಕ್ತಾಯದ ನಿರೀಕ್ಷೆ ಇಲ್ಲದ ಕಾರಣ ವಿಶೇಷ ಟಾಡಾ ನ್ಯಾಯಾಲಯವು ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಆಲಂ ವಾದಿಸಿದರು. 'ಆರೋಪಗಳನ್ನು ಇನ್ನೂ ವಿಚಾರಣೆ ಮೂಲಕ ಸಾಬೀತುಪಡಿಸಬೇಕಾಗಿದೆ ಮತ್ತು 11 ವರ್ಷಗಳವರೆಗೆ ಪೂರ್ವ-ವಿಚಾರಣಾ ಬಂಧನ ಸಮರ್ಥನೀಯವಲ್ಲ'ಎಂದು ಅವರು ಹೇಳಿದರು.
ರಾಜಸ್ಥಾನ ಪರವಾಗಿ ವಾದಿಸಿದ ವಕೀಲ ವಿಶಾಲ್ ಮೇಘ್ವಾಲ್, ಆರೋಪಿಯ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿಲ್ಲ ಎಂದು ಒಪ್ಪಿಕೊಂಡರು. ಆದರೆ, ಆರೋಪಿಯು ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ವಾದಿಸಿದರು.
ಆದರೆ, ಈ ಸಮರ್ಥನೆಯನ್ನು ನ್ಯಾಯಾಲಯ ಒಪ್ಪಲಿಲ್ಲ. 2010 ರಿಂದ ಅವರು ಬಂಧನದಲ್ಲಿದ್ದಾಗ ಏಕೆ ಆರೋಪಗಳನ್ನು ದಾಖಲಿಸಲಾಗಿಲ್ಲ ಎಂದು ಪೀಠ ಕೇಳಿತು. 'ಆತನಿಗೆ ತ್ವರಿತ ವಿಚಾರಣೆಗೆ ಹಕ್ಕು ಇದೆ. ಆತನನ್ನು ದೋಷಿ ಎಂದು ಘೋಷಿಸಿ ಅಥವಾ ಮುಕ್ತಗೊಳಿಸಿ, ನಮಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಕನಿಷ್ಠ ವಿಚಾರಣೆ ನಡೆಸಿ. ವಿಚಾರಣೆ ಇಲ್ಲದೆ ಅನಿರ್ದಿಷ್ಟಾವಧಿಯಲ್ಲಿ ಬಂಧನದಲ್ಲಿಡಲಾಗಿದೆ' ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ಪೀಠ ಹೇಳಿದೆ.