ತಿರುವನಂತಪುರ: ಕೇರಳದ ಎಲ್ಲ ಜಿಲ್ಲೆಗಳಿಗೆ ತುರ್ತು ಕೋವಿಡ್ ನೆರವು ಮತ್ತು ನಿಯಂತ್ರಣ ಪ್ಯಾಕೇಜ್ (ಇಸಿಪಿಆರ್) ಅಡಿಯಲ್ಲಿ 1 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಎರಡನೇ ಕೋವಿಡ್ ರಕ್ಷಣಾ ಪ್ಯಾಕೇಜ್‌ನ ಭಾಗವಾಗಿ ಈ ಹಿಂದೆ ನೀಡಲಾದ 267.35 ಕೋಟಿ ರೂಪಾಯಿಗಳನ್ನು ಹೊರತುಪಡಿಸಿ, ತುರ್ತು ಅಗತ್ಯಗಳಿಗಾಗಿ ಪ್ರತಿ ಜಿಲ್ಲೆಗಳಿಗೆ ಇನ್ನೂ 1 ಕೋಟಿ ರೂ. ನೀಡಲಾಗುವುದು ಎಂದು ಘೋಷಿಸಿದರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಇಂದು ಕೇರಳಕ್ಕೆ ಭೇಟಿ ನೀಡಿ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರೊಂದಿಗೆ ಕೋವಿಡ್ ತಡೆಗಟ್ಟುವಿಕೆ ಕುರಿತು ಚರ್ಚಿಸಿದ ಬಳಿಕ ಈ ಘೋಷಣೆಯನ್ನು ಮಾಡಿರುವರು.
ಪ್ರತಿ ಜಿಲ್ಲೆಗೆ ತಮ್ಮದೇ ವೈದ್ಯಕೀಯ ವಿಭಾಗ ರಚಿಸಲು 1 ಕೋಟಿ ರೂ. ನೀಡಲಾಗುತ್ತದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು ಸ್ಥಾಪಿಸಲು ಈ ಮೊತ್ತ ಬಳಸಲು ಸಚಿವರು ಸೂಚಿಸಿದರು. ರಾಜ್ಯದಲ್ಲಿ ಕೋವಿಡ್ ಪರಿಣಾಮಕಾರಿ ನಿಯಂತ್ರಣ ಮತ್ತು ಆರೋಗ್ಯ ಮೂಲಸೌಕರ್ಯಗಳ ಸುಧಾರಣೆಗಾಗಿ ಎರಡನೇ ತುರ್ತು ಕೋವಿಡ್ ತಡೆಗಟ್ಟುವಿಕೆ ಪ್ಯಾಕೇಜ್ ಅಡಿಯಲ್ಲಿ ರೂ .267.35 ಕೋಟಿ ಮಂಜೂರಾಗಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಹದಗೆಡುತ್ತಿರುವ ಕೋವಿಡ್ ಪರಿಸ್ಥಿತಿಯ ಕುರಿತು ಚರ್ಚಿಸಲು ಇಂದು ತಿರುವನಂತಪುರಕ್ಕೆ ಆಗಮಿಸಿದ ಕೇಂದ್ರ ಆರೋಗ್ಯ ಸಚಿವರು, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೊಂದಿಗೆ ವಿವರವಾದ ಚರ್ಚೆ ನಡೆಸಿದರು. ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದರು. ಕೇರಳಕ್ಕೆ ಹೆಚ್ಚಿನ ಲಸಿಕೆಗಳನ್ನು ಒದಗಿಸುವುದು ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಕೇಂದ್ರ ಸಚಿವರು ಭರವಸೆ ನೀಡಿದರು. ಕೇಂದ್ರವು ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಟೆಲಿಮೆಡಿಸಿನ್ ಕೇಂದ್ರಗಳ ರಚನೆಗೆ ತುರ್ತು ಕ್ರಮಗಳಿಗೆ ಸೂಚನೆ ನೀಡಿದೆ.
ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಿ, 10 ಕಿಲೋ ಲೀಟರ್ ದ್ರವ ಆಮ್ಲಜನಕದ ಶೇಖರಣಾ ಸಾಮರ್ಥ್ಯವಿರುವ ಟ್ಯಾಂಕ್ ನಿರ್ಮಿಸುವುದು ಮತ್ತು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ದೆಹಲಿಗೆ ಹಿಂದಿರುಗುವ ಮೊದಲು, ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಾಗಿರುವ ಮಾಂಡವಿಯಾ ಅವರು ತಿರುವನಂತಪುರಂನಲ್ಲಿರುವ ಹಿಂದೂಸ್ತಾನ್ ಲೈಫ್ ಕೇರ್‌ಗೆ ಭೇಟಿ ನೀಡಿ ಅದರ ಚಟುವಟಿಕೆಗಳನ್ನು ಪರಿಶೀಲಿಸಿದರು. ಬಿಜೆಪಿ ಕೇಂದ್ರ ನೇತಾರ ವಿ.ಮುರಳೀಧರನ್, ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮೊದಲಾದವರು ಜೊತೆಗಿದ್ದರು.