ನವದೆಹಲಿ: ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದವರಲ್ಲಿ ಹೆಚ್ಚಿನ ಸಂಖ್ಯೆಯ ಕೊರೋನಾ ಸೋಂಕುಗಳು ಪತ್ತೆಯಾಗುತ್ತಿದ್ದು ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಗಮನ ಸೆಳೆದಿದೆ. ಕುತೂಹಲಕಾರಿ ಸನ್ನಿವೇಶದಲ್ಲಿ ಸಾಂಕ್ರಾಮಿಕ ರೋಗ ತನಿಖೆ ಆರಂಭಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಂದು ಡೋಸ್ ಲಸಿಕೆ ಪಡೆದವರಲ್ಲಿ 14,974 ಮಂದಿ ಮತ್ತು ಎರಡು ಡೋಸ್ ಲಸಿಕೆಯ ನಂತರ 5,042 ಸೋಂಕುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
6 ಸದಸ್ಯರ ತಂಡವನ್ನು ಮುನ್ನಡೆಸುತ್ತಿರುವ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನ ನಿರ್ದೇಶಕರಾದ ಎಸ್.ಕೆ ಸಿಂಗ್, ಇಂತಹ ಪ್ರಕರಣಗಳಲ್ಲಿ ರೋಗದ ತೀವ್ರತೆ, ಆಸ್ಪತ್ರೆಗೆ ದಾಖಲಿಸುವ ದರ ಮತ್ತು ಸಾವಿನ ದರಗಳಂತಹ ನಿರ್ದಿಷ್ಟತೆಗಳ ಮಾಹಿತಿ ನೀಡುವಂತೆ ಕೇರಳ ಸರ್ಕಾರವನ್ನು ಕೇಳಿರುವುದಾಗಿ ಹೇಳಿದರು.
ಈ ದತ್ತಾಂಶ ಒಂದೆರೆಡು ದಿನಗಳಲ್ಲಿ ಸಿಗಬಹುದೆಂದು ಆಶಿಸುತ್ತಿದ್ದೇವೆ. ಅದನ್ನು ಹೆಚ್ಚು ಅರ್ಥಪೂರ್ಣವಾಗಿ ವಿಶ್ಲೇಷಿಸಲು ಸಾಧ್ಯವಾಗುತ್ತದೆ ಎಂದು ಸಿಂಗ್ ಈ ಪತ್ರಿಕೆಗೆ ತಿಳಿಸಿದರು. ಹೊಸ ಸೋಂಕು ಮತ್ತು ಮರು ಸೋಂಕುಗಳ ಚಾಲನಾ ಅಂಶ ಮತ್ತು ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.
ಪತ್ತನಂತಿಟ್ಟದಲ್ಲಿ ಇದುವರೆಗೆ ಸುಮಾರು 1.35 ಲಕ್ಷ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಲಸಿಕೆ ಹಾಕಿದವರಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕುಗಳು ಮತ್ತು ಸೋಂಕುಗಳ ಹೊರತಾಗಿಯೂ ಕೇರಳದಲ್ಲಿ ಒಟ್ಟಾರೆ ಸಾವಿನ ಪ್ರಮಾಣವು 0.5 % ಕ್ಕಿಂತ ಕಡಿಮೆ ಇದೆ.