ನವದೆಹಲಿ: ಜಾತಿಗಣತಿಗಾಗಿ ಹೊಸದಾಗಿ ದತ್ತಾಂಶಗಳನ್ನು ತಾನು ಸಂಗ್ರಹಿಸುವುದಿಲ್ಲ ಎಂದು ಕೇಂದ್ರ ಸರಕಾರವು ಬುಧವಾರ ಸಂಸತ್ತಿನಲ್ಲಿ ತಿಳಿಸಿದೆ.
2011ರಲ್ಲಿ ಸಾಮಾಜಿಕ-ಆರ್ಥಿಕ ಜನಗಣತಿ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ಕಚ್ಚಾ ಜಾತಿ ದತ್ತಾಂಶಗಳು ಭಾರತದ ರಿಜಿಸ್ಟ್ರಾರ್ ಜನರಲ್(ಆರ್ಜಿಐ) ಬಳಿಯಲ್ಲಿವೆ,ಆದರೆ ಅವುಗಳಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಆರ್ಜಿಐ ಗಮನಿಸಿರುವುದರಿಂದ ದತ್ತಾಂಶಗಳನ್ನು ಬಿಡುಗಡೆಗೊಳಿಸುವ ಯಾವುದೇ ಪ್ರಸ್ತಾವವಿಲ್ಲ. ದತ್ತಾಂಶಗಳು ತುಂಬ ಹಳೆಯದಾಗಿದ್ದು,ಉಪಯೋಗಕ್ಕೆ ಅರ್ಹವಾಗಿಲ್ಲ ಎಂದು ಸರಕಾರವು ಹೇಳಿದೆ.
2021ರ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಕೈಗೆತ್ತಿಕೊಳ್ಳಲು ಸರಕಾರವು ಯೋಜಿಸಿದೆಯೇ ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು, 2021ರ ಜನಗಣತಿಯು ನಡೆಯುವ ಸಂದರ್ಭದಲ್ಲಿ 1950ರ ಸಾಂವಿಧಾನಿಕ ಆದೇಶಗಳ ಮೂಲಕ ಅಧಿಸೂಚಿಲಾಗಿರುವ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಮಾತ್ರ ನಮೂದಿಸಲಾಗುವುದು ಎಂದು ತಿಳಿಸಿದರು. 2011ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಆಗಿನ ವಸತಿ ಮತ್ತು ನಗರ ಬಡತನ ನಿವಾರಣೆ ಸಚಿವಾಲಯಗಳು ಅನುಕ್ರಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿ (ಎಸ್‌ಇಸಿಸಿ)ಯನ್ನು ನಡೆಸಿದ್ದು,ಜಾತಿ ದತ್ತಾಂಶವನ್ನು ಹೊರತುಪಡಿಸಿದ ಎಸ್‌ಇಸಿಸಿ 2011ರ ದತ್ತಾಂಶಗಳನ್ನು ಆಯಾ ಸಚಿವಾಲಯಗಳು ಅಂತಿಮಗೊಳಿಸಿವೆ ಮತ್ತು ಪ್ರಕಟಿಸಿವೆ ಎಂದು ತಿಳಿಸಿದ ರಾಯ್,ಎಸ್‌ಇಸಿಸಿ-2011 ಪ್ರಕ್ರಿಯೆಗಾಗಿ ಲಾಜಿಸ್ಟಿಕ್ಸ್ ಮತ್ತು ತಾಂತ್ರಿಕ ಬೆಂಬಲವನ್ನು ಆರ್ಜಿಐ ಕಚೇರಿಯು ಒದಗಿಸಿತ್ತು. ಕಚ್ಚಾ ಜಾತಿ ದತ್ತಾಂಶಗಳನ್ನು ಅವುಗಳ ವರ್ಗೀಕರಣಕ್ಕಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಸಚಿವಾಲಯವು ತಿಳಿಸಿರುವಂತೆ ಈ ಹಂತದಲ್ಲಿ ಜಾತಿ ದತ್ತಾಂಶವನ್ನು ಬಿಡುಗಡೆಗೊಳಿಸುವ ಪ್ರಸ್ತಾವವಿಲ್ಲ ಎಂದು ಹೇಳಿದರು.
ರಾಜ್ಯ ಸರಕಾರಗಳು ಸೇರಿದಂತೆ ವಿವಿಧ ಪಾಲುದಾರರೊಡನೆ ಸಮಾಲೋಚಿಸಿ ಜನಗಣತಿ ವೇಳಾಪಟ್ಟಿಯನ್ನು ರೂಪಿಸಲಾಗಿದೆ ಎಂದು ಹೇಳಿದ ಅವರು,ಜನಗಣತಿ 2021ನ್ನು ನಡೆಸುವ ಕೇಂದ್ರದ ಉದ್ದೇಶವನ್ನು 2019,ಮಾ.28ರ ಗೆಜೆಟ್ನಲ್ಲಿ ಅಧಿಸೂಚಿಸಲಾಗಿತ್ತು,ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜನಗಣತಿ ಚಟುವಟಿಕೆಗಳು ಮುಂದೂಡಲ್ಪಟಿವೆ. ಜನಗಣತಿ ಪ್ರಕ್ರಿಯೆಯಲ್ಲಿ ಶಿಕ್ಷಣ,ಎಸ್ಸಿ ಮತ್ತು ಎಸ್ಟಿ,ಧರ್ಮ,ಭಾಷೆ,ಮದುವೆ,ಫಲವತ್ತತೆ,ಅಂಗವೈಕಲ್ಯ,ವೃತ್ತಿ ಮತ್ತು ವ್ಯಕ್ತಿಗಳ ವಲಸೆಯಂತಹ ಜನಸಂಖ್ಯಾಶಾಸ್ತ್ರೀಯ ಮತ್ತು ಸಾಮಾಜಿಕ-ಆರ್ಥಿಕ ಮಾನದಂಡಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲಾಗುವುದು ಎಂದರು.
ಮುಂಬರುವ ಜನಗಣತಿಯು ಮೊದಲ ಡಿಜಿಟಲ್ ಗಣತಿಯಾಗಲಿದ್ದು,ಸ್ವಯಂ ನಮೂದುವಿಕೆಗೆ ಅವಕಾಶವಿರಲಿದೆ. ದತ್ತಾಂಶ ಸಂಗ್ರಹಕ್ಕಾಗಿ ಮೊಬೈಲ್ ಅಪ್ಲಿಕೇಷನ್ ಹಾಗೂ ಜನಗಣತಿ ಸಂಬಂಧಿತ ವಿವಿಧ ಚಟುವಟಿಕೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಜನಗಣತಿ ಪೋರ್ಟಲ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದೂ ರಾಯ್ ತಿಳಿಸಿದರು.