ನವದೆಹಲಿ: ಭಾರತ-ಚೀನಾ ಎಲ್‌ಎಸಿಯಲ್ಲಿ ಕಾವಲು ಕಾಯುವ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಗಳಿಗೆ ಶೌರ್ಯ ಪದಕಗಳನ್ನು ಘೋಷಿಸಲಾಗಿದೆ.
ಕಳೆದ ವರ್ಷ ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತದ ಸೇನೆ ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ ಹೋರಾಡಿದ್ದರಿಂದ ಐಟಿಬಿಪಿ ಪಡೆಗಳಿಗೆ ಶೌರ್ಯ ಪದಕಗಳನ್ನು ನೀಡಲಾಗುತ್ತಿದೆ.
ವಾರ್ಷಿಕ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ನೀಡಲಾಗುವ 1,380 ಸೇವಾ ಪದಕಗಳ ಪೈಕಿ ಶೌರ್ಯ ಪದಕಗಳನ್ನು ರಾಜ್ಯ, ಕೇಂದ್ರ ಪೊಲೀಸ್ ಪಡೆಗಳಿಗೆ ನೀಡಲಾಗುತ್ತದೆ.
ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು, 628 ಪೊಲೀಸ್ ಶೌರ್ಯ ಪದಕ (ಪಿಎಂಜಿ) ವಿಶಿಷ್ಟ ಸೇವೆಗಳಿಗಾಗಿ 88 ರಾಷ್ಟ್ರಪತಿಗಳ ಪೊಲೀಸ್ ಪದಕ, ಶ್ಲಾಘನೀಯ ಸೇವೆಗಳಿಗೆ 662 ಪೊಲೀಸ್ ಪದಕಗಳನ್ನು ಘೋಷಣೆ ಮಾಡಲಾಗಿದೆ.
ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಈ ಬಾರಿ ಜಮ್ಮು-ಕಾಶ್ಮೀರದ ಸಬ್ ಇನ್ಸ್ಪೆಕ್ಟರ್ ಅಮರ್ ದೀಪ್, ಸಿಆರ್ ಪಿಎಫ್ ನ ಮುಖ್ಯ ಪೇದೆ ಸುನಿಲ್ ದತ್ತಾತ್ರೇಯ (ಮರಣೋತ್ತರ)ರವಾಗಿ ನೀಡಲಾಗುತ್ತಿದೆ.
ಅತಿ ಹೆಚ್ಚು ಶೌರ್ಯ ಪದಕಗಳನ್ನು 257 (1 ಪಿಪಿಎಂಜಿ ಹಾಗೂ 256 ಪಿಎಂಜಿ)ಯನ್ನು ಜಮ್ಮು-ಕಾಶ್ಮೀರ ಪೊಲೀಸರು ಪಡೆದಿದ್ದರೆ, ಸಿಆರ್ ಪಿಎಫ್ 151 (1 ಪಿಪಿಎಂಜಿ ಹಾಗೂ 150 ಪಿಎಂಜಿ) ಪದಕಗಳನ್ನು ಪಡೆದಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
23 ಶೌರ್ಯ ಪದಕಗಳ ಪೈಕಿ 20 ನ್ನು ಐಟಿಬಿಪಿ ಪಡೆದಿದ್ದು, ಈ 20 ಮಂದಿಯ ಪೈಕಿ 8 ಸಿಬ್ಬಂದಿಗೆ ಮಾತೃಭೂಮಿಯನ್ನು ರಕ್ಷಿಸಲು ನಿಖರವಾದ ಯೋಜನೆ ಮತ್ತು ಯುದ್ಧತಂತ್ರದ ಒಳನೋಟಕ್ಕಾಗಿ ಗುರುತಿಸಿ ಪೊಲೀಸ್ ಶೌರ್ಯ ಪದಕ (ಪಿಎಂಜಿ) ಪದಕವನ್ನು ಘೋಷಣೆ ಮಾಡಲಾಗಿದೆ.