ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಸೆಪ್ಟೆಂಬರ್ 25ರಂದು 'ಭಾರತ್ ಬಂದ್'ಗೆ ಕರೆ ನೀಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾದ ಪ್ರತಿಭಟನೆ ದೇಶದಾದ್ಯಂತ ವಿಸ್ತರಿಸುವುದು ಹಾಗೂ ಅಂದೋಲನವನ್ನು ತೀವ್ರಗೊಳಿಸುವುದು ಇದರ ಹಿಂದಿನ ಗುರಿಯಾಗಿದೆ.
ದೆಹಲಿ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಕೆಎಂ ಮುಖಂಡ ಆಶಿಶ್ ಮಿತ್ತಲ್, 'ನಾವು ಸೆಪ್ಟೆಂಬರ್ 25ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ.ಕಳೆದ ವರ್ಷ ಇದೇ ದಿನಾಂಕದಂದು ಬಂದ್ ಆಯೋಜಿಸಿದ ನಂತರ ಇದು ನಡೆಯುತ್ತಿದೆ. ಕಳೆದ ವರ್ಷ ಕೊರೊನಾವೈರಸ್ ನಡುವೆ ನಡೆದ ಪ್ರತಿಭಟನೆಗಿಂತಲೂ ಹೆಚ್ಚಿನ ಯಶಸ್ಸು ಸಿಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಘು ಗಡಿ ಭಾಗದಲ್ಲಿ ರೈತರು ಹೋರಾಟ ಆರಂಭಿಸಿ ಒಂಬತ್ತು ತಿಂಗಳು ಪೂರ್ಣಗೊಂಡಿದೆ. ಇದರಂಗವಾಗಿ ವಿವಿಧ ರೈತ ಸಂಘಟನೆಗಳು ಪ್ರತಿಭಟನಾ ಸ್ಥಳದಲ್ಲೇ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಸಮಾವೇಶ' ಸಂಪೂರ್ಣ ಯಶಸ್ಸು ಕಂಡಿದೆ ಎಂದವರು ತಿಳಿಸಿದ್ದಾರೆ.
22 ರಾಜ್ಯಗಳ 300ರಷ್ಟು ರೈತ ಸಂಘದ ಮುಖಂಡರು ಸೇರಿದಂತೆ ಮಹಿಳೆ, ಯುವ, ಬುಡಕಟ್ಟು, ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಸರ್ಕಾರವು ಕಾರ್ಪೊರೇಟ್ ಪರ ಮತ್ತು ರೈತರ ವಿರುದ್ಧ ಹೇಗೆ ನೀತಿ ಜಾರಿಗೊಳಿಸುತ್ತಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು.
ಇದುವರೆಗೆ ಕೇಂದ್ರ ಸರ್ಕಾರದೊಂದಿಗೆ 10ಕ್ಕೂ ಹೆಚ್ಚು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.