ನವದೆಹಲಿ: ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಗೆ ಕರೆ ನೀಡಿದೆ. ಈ ತಿಂಗಳ 26 ನೇ ಗುರುವಾರ ಸಭೆ ನಡೆಯಲಿದೆ.
ಅಫ್ಘಾನಿಸ್ತಾನದ ಪರಿಸ್ಥಿತಿ, ಭಾರತ ಅನುಸರಿಸಬೇಕಾದ ನಿಲುವಿನ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನಲ್ಲಿನ ಬೆಳವಣಿಗೆಗಳನ್ನು ರಾಜಕೀಯ ಪಕ್ಷಗಳಿಗೆ ವಿವರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದ್ದಾರೆ. ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈ ಶಂಕರ್ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ಆಕ್ರಮಣದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಿಂದ ಎಲ್ಲಾ ದೇಶಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿ ಹಾಗೂ ನಾಗರಿಕರನ್ನು ಸ್ಥಳಾಂತರಿಸುತ್ತಿವೆ. ಭಾರತ ಕೂಡ ಆ ದೇಶದಿಂದ ವಿಮಾನಗಳ ಮೂಲಕ ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿದೆ. ಆಗಸ್ಟ್ 16 ರಂದು ಆರಂಭಗೊಂಡ ಸ್ಥಳಾಂತರ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆ ಹಾಗೂ ಏರ್ ಇಂಡಿಯಾ ಜಂಟಿಯಾಗಿ ಪಾಲ್ಗೊಂಡಿವೆ. ಒಂದು ಹಂತದಲ್ಲಿ ಭಾರತೀಯರನ್ನು ತಾಲಿಬಾನ್ ಅಪಹರಿಸಿದ ವರದಿಗಳು ಬಂದಿದ್ದವು. ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿ ತಾಲಿಬಾನ್ ಅವರನ್ನು ವಿಚಾರಣೆಗೊಳಪಡಿಸಿತ್ತು ಎಂದು ನಂತರ ತಿಳಿದುಬಂದಿತ್ತು. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.