ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಗುರುವಾರಕ್ಕೆ ಎರಡು ವರ್ಷವಾಗಿದ್ದು, ಬಿಜೆಪಿ ಕಣಿವೆಯಲ್ಲಿ ತಿರಂಗಾ ರ್ಯಾಲಿಗಳನ್ನು ನಡೆಸುವ ಮೂಲಕ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿತು.
ಆದರೆ ಪಿಡಿಪಿ ಇದನ್ನು "ಜಮ್ಮು ಮತ್ತು ಕಾಶ್ಮೀರದ ಶೋಕ ದಿನ" ಎಂದು ಘೋಷಿಸಿತು ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿತು.
ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಜನರ ಸಂಕ್ಷಿಪ್ತ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮರುಸ್ಥಾಪನೆಗಾಗಿ ತಮ್ಮ ಪಕ್ಷ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಹೇಳಿದರು.
ಅನಂತನಾಗ್ ಜಿಲ್ಲೆಯ ಖಾನಬಾಲ್‌ನ ಬಿಜೆಪಿಯ ಮುನ್ಸಿಪಲ್ ಕೌನ್ಸಿಲರ್ ರೊಮಸಿಯಾ ರಫೀಕ್ ಅವರು ಖಾನಬಾಲ್‌ನ ಪದವಿ ಕಾಲೇಜ್ ಬಳಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಕಣಿವೆಯಲ್ಲಿ ಪಕ್ಷದ ಸಂಭ್ರಮಾಚರಣೆಗೆ ಚಾಲನೆ ನೀಡಿದರು.
ಬಂಡಿಪೋರಾ ಬಿಜೆಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ರೆಹಮಾನ್ ಟಿಕ್ರಿ ಅವರು, ಪಕ್ಷದ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.
ಶ್ರೀನಗರದಲ್ಲಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಹಲವಾರು ಪಿಡಿಪಿ ನಾಯಕರು ಮತ್ತು ಕಾರ್ಯಕರ್ತರು ಕಪ್ಪು ಪಟ್ಟಿಗಳನ್ನು ಧರಿಸಿ ಶೇರ್-ಇ-ಕಾಶ್ಮೀರ ಪಾರ್ಕ್ ಬಳಿಯ ಪಕ್ಷದ ಮುಖ್ಯ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.