ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ(ಐಸಿಎಚ್‌ಆರ್)ಯ ತ್ರಿಸದಸ್ಯ ಸಮಿತಿಯು 1921ರ ಬಂಡಾಯದಲ್ಲಿನ ಸ್ವಾತಂತ್ರ ಹೋರಾಟಗಾರರ ಹೆಸರುಗಳ ಪರಿಶೀಲನಾ ವರದಿಯಲ್ಲಿ ವ್ಯಾಗನ್ ದುರಂತದ ಬಲಿಪಶುಗಳು ಮತ್ತು ಮಲಬಾರ್ ಬಂಡಾಯ ನಾಯಕರನ್ನು ಭಾರತದ ಸ್ವಾತಂತ್ರ ಹೋರಾಟದ ಹುತಾತ್ಮರ ಕುರಿತ ಪುಸ್ತಕದಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿದೆ ಎಂದು thewire.in ವರದಿ ಮಾಡಿದೆ.
ಸಮಿತಿಯು ತನ್ನ ವರದಿಯನ್ನು 2016ರಲ್ಲಿ ಸಲ್ಲಿಸಿತ್ತು. 'ಡಿಕ್ಷನರಿ ಆಫ್ ಮಾರ್ಟರ್ಸ್:ಇಂಡಿಯಾಸ್ ಫ್ರೀಡಂ ಸ್ಟ್ರಗಲ್ 1857-1947' ಪುಸ್ತಕವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದ್ದರು. ಪುಸ್ತಕದಲ್ಲಿಯ ನಮೂದುಗಳನ್ನು ಪುನರ್ಪರಿಶೀಲಿಸಿರುವ ಐಸಿಎಚ್‌ಆರ್ ಅಲಿ ಮುಸ್ಲಿಯಾರ್, ವೇರಿಯಮ್ಕುನ್ನತ್ ಅಹ್ಮದ್ ಹಾಜಿ ಮತ್ತು ಅವರ ಇಬ್ಬರು ಸೋದರರು ಸೇರಿದಂತೆ 387 'ಮಾಪಿಳ್ಳೆ ಹುತಾತ್ಮ' ರ ಹೆಸರುಗಳನ್ನು ಪುಸ್ತಕದಿಂದ ತೆಗೆಯುವಂತೆ ಶಿಫಾರಸು ಮಾಡಿದೆ.
ಮಾಪಿಳ್ಳೆ (ಮುಸ್ಲಿಂ) ದಂಗೆಗಳು ಎಂದೂ ಕರೆಯಲಾಗುವ ಮಲಬಾರ್ ಬಂಡಾಯವನ್ನು ಮುಸ್ಲಿಂ ಗೇಣಿದಾರರು ಬ್ರಿಟಿಷ್ ಆಡಳಿತಗಾರರು ಮತ್ತು ಸ್ಥಳೀಯ ಹಿಂದು ಜಮೀನುದಾರರ ವಿರುದ್ಧ 1921,ಆ.20ರಂದು ಆರಂಭಿಸಿದ್ದರು. ದಂಗೆಯು 2,339 ಬಂಡುಕೋರರು ಸೇರಿದಂತೆ ಸುಮಾರು 10,000 ಜನರ ಜೀವಹಾನಿಗೆ ಕಾರಣವಾಗಿತ್ತು ಎಂದು ಕೆಲವು ಐತಿಹಾಸಿಕ ದಾಖಲೆಗಳು ಬೆಟ್ಟುಮಾಡಿವೆ.
ಮಲಬಾರ್ ಬಂಡಾಯವನ್ನು ದಕ್ಷಿಣ ಭಾರತದಲ್ಲಿಯ ಮೊದಲ ರಾಷ್ಟ್ರವಾದಿ ದಂಗೆಗಳಲ್ಲಿ ಒಂದು ಎಂದು ತಿಳಿಯಲಾಗಿದೆ. ಉತ್ತರ ಕೇರಳದ ಮಲಪ್ಪುರಂ ಜಿಲ್ಲೆಯ ವಿವಿಧೆಡೆಗಳಲ್ಲಿ ದಂಗೆ ಘಟನೆಗಳು ನಡೆದಿದ್ದವು. ಆಗಿನ ಕೇರಳ ಸರಕಾರವು ದಂಗೆಗಳಲ್ಲಿ ಪಾಲ್ಗೊಂಡಿದ್ದವರನ್ನು ಸ್ವಾತಂತ್ರ ಹೋರಾಟಗಾರರ ವರ್ಗಕ್ಕೆ ಸೇರಿಸಿತ್ತು. ಅದನ್ನು ರೈತರ ಬಂಡಾಯ ಎಂದೂ ಬಣ್ಣಿಸಲಾಗಿತ್ತು.
ಹೆಚ್ಚುಕಡಿಮೆ ಮಾಪಿಳ್ಳೆಗಳ ಎಲ್ಲ ದಂಗೆಗಳು ಕೋಮುಸ್ವರೂಪದ್ದಾಗಿದ್ದವು. ಅವು ಹಿಂದು ಸಮಾಜದ ವಿರುದ್ಧವಾಗಿದ್ದವು ಮತ್ತು ಕೇವಲ ಅಸಹಿಷ್ಣುತೆಯಿಂದ ಈ ದಂಗೆಗಳು ನಡೆದಿದ್ದವು. ಹೀಗಾಗಿ ಇನ್ನಷ್ಟೇ ಪ್ರಕಟಗೊಳ್ಳಬೇಕಿರುವ ಆವೃತ್ತಿಯಿಂದ ಈ ಹೆಸರುಗಳನ್ನು ತೆಗೆಯಬೇಕು ಎಂದು ಐಸಿಎಚ್‌ಆರ್ ಸದಸ್ಯ ಸಿ.ಐ.ಇಸಾಕ್ ವರದಿಯಲ್ಲಿ ಹೇಳಿದ್ದಾರೆ.
ವ್ಯಾಗನ್ ದುರಂತದಲ್ಲಿ ಸತ್ತವರಲ್ಲಿ ಯಾರೂ ಭಾರತದ ಸ್ವಾತಂತ್ರ ಹೋರಾಟಗಾರರಾಗಿರಲಿಲ್ಲ. ಅವರೆಲ್ಲ ಖಿಲಾಫತ್ ಧ್ವಜವನ್ನು ಹಾರಿಸಿದ್ದರು ಹಾಗೂ ಸಂಕ್ಷಿಪ್ತ ಅವಧಿಗೆ ಖಿಲಾಫತ್ ಮತ್ತು ಖಿಲಾಫತ್ ನ್ಯಾಯಾಲಯಗಳನ್ನು ಸ್ಥಾಪಿಸಿದ್ದರು. ದಂಗೆಗಳಲ್ಲಿ ಪಾಲ್ಗೊಂಡವರನ್ನು ಸೇನೆಯು ಬಂಧಿಸಿತ್ತು. ದಂಗೆಯಲ್ಲಿ ಭಾಗವಹಿಸಿದ್ದ ಸುಮಾರು 10 ಹಿಂದುಗಳ ಹೆಸರುಗಳನ್ನೂ ಪುಸ್ತಕದಿಂದ ತೆಗೆಯಬೇಕು ಎಂದಿರುವ ಇಸಾಕ್, ಸೂಕ್ತ ವಿಚಾರಣೆಯ ಬಳಿಕ ಬ್ರಿಟಿಷರು ದಂಗೆಕೋರರನ್ನು ಶಿಕ್ಷೆಗೊಳಪಡಿಸಿದ್ದರು ಮತ್ತು ಮೃತರನ್ನು ಬೇರೆಲ್ಲಿಯೂ ಎಂದೂ ಸ್ವಾತಂತ್ರ ಹೋರಾಟಗಾರರೆಂದು ಪರಿಗಣಿಸಲಾಗಿಲ್ಲ ಎಂದು ಹೇಳಿದ್ದಾರೆ.
ಬಂಡಾಯವು ಖಿಲಾಫತ್ ಅನ್ನು ಸ್ಥಾಪಿಸುವ ಪ್ರಯತ್ನವಾಗಿತ್ತು ಎಂದು ಬೆಟ್ಟುಮಾಡಿರುವ ವರದಿಯು, ಶರಿಯಾ ನ್ಯಾಯಾಲಯವನ್ನು ಸ್ಥಾಪಿಸಿದ್ದ ಮತ್ತು ಭಾರೀ ಸಂಖ್ಯೆಯ ಶಿರಚ್ಛೇದ ಮಾಡಿದ್ದ ದಂಗೆಕೋರ ಎಂದು ಹಾಜಿಯ ಪಾತ್ರವನ್ನು ಪ್ರಮುಖವಾಗಿ ಬಿಂಬಿಸಿದೆ.
ಬಂಡುಕೋರರು ಜಾತ್ಯತೀತ ಮುಸ್ಲಿಮರನ್ನೂ ಬಿಟ್ಟಿರಲಿಲ್ಲ. ಅವರಿಂದ ಕೊಲ್ಲಲ್ಪಟ್ಟವರು ನಾಸ್ತಿಕರಾಗಿದ್ದರು. ವಿಚಾರಣಾಧೀನ ಕೈದಿಗಳಾಗಿದ್ದ ಹೆಚ್ಚಿನ 'ಮಾಪಿಳ್ಳೆ ಹುತಾತ್ಮರು ' ಕಾಲರಾದಂತಹ ರೋಗಗಳು ಮತ್ತು ಸಹಜ ಕಾರಣಗಳಿಂದ ಮೃತಪಟ್ಟಿದ್ದರು. ಹೀಗಾಗಿ ಅವರನ್ನು ಹುತಾತ್ಮರೆಂದು ಪರಿಗಣಿಸಲು ಸಾಧ್ಯವಿಲ್ಲ. ನ್ಯಾಯಾಲಯದ ವಿಚಾರಣೆಯ ಬಳಿಕ ಅವರಲ್ಲಿ ಕೈಬೆರಳೆಣಿಕೆಯ ಜನರನ್ನು ಮಾತ್ರ ಗಲ್ಲಿಗೇರಿಸಲಾಗಿತ್ತು ಎಂದು ವರದಿಯು ಹೇಳಿದೆ.
ರಾಜಕೀಯ ಸಿದ್ಧಾಂತ
1921ರ ಮಾಪಿಳ್ಳೆ ಬಂಡಾಯವು ಭಾರತದಲ್ಲಿ 'ತಾಲಿಬಾನ್ ಮನಃಸ್ಥಿತಿ'ಯ ಮೊದಲ ಅಭಿವ್ಯಕ್ತಿಗಳಲ್ಲೊಂದಾಗಿತ್ತು ಎಂದು ಆ.19ರಂದು ಕಾರ್ಯಕ್ರಮವೊಂದರಲ್ಲಿ ಪ್ರತಿಪಾದಿಸಿದ್ದ ಆರೆಸ್ಸೆಸ್ ನಾಯಕ ರಾಮ ಮಾಧವ ಅವರು, ಕೇರಳ ಎಡರಂಗ ಸರಕಾರವು ಅದನ್ನು ಕಮ್ಯುನಿಸ್ಟ್ ಕ್ರಾಂತಿ ಎಂದು ಬಣ್ಣಿಸುವ ಮೂಲಕ ವೈಭವೀಕರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಮಾಧವ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಿಪಿಐ ಪ್ರ.ಕಾರ್ಯದರ್ಶಿ ಡಿ.ರಾಜಾ ಅವರು, ಆರೆಸ್ಸೆಸ್ ಕೋಮುವಾದಿ ಸಿದ್ಧಾಂತವನ್ನು ಅನುಸರಿಸುತ್ತಿದೆ ಮತ್ತು ಇತಿಹಾಸವನ್ನು ಮರುವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಮಾಪಿಳ್ಳೆ ಬಂಡಾಯವು ಊಳಿಗಮಾನ್ಯ ಧಣಿಗಳು ಮತ್ತು ಬ್ರಿಟಿಷ್ ಆಡಳಿತಗಾರರ ವಿರುದ್ಧವಾಗಿತ್ತು. ಇದೇ ಕಾರಣದಿಂದ ದಂಗೆಕೋರರನ್ನು ಬಂಧಿಸಿ ಸೆಲ್ಯುಲರ್ ಜೈಲುಗಳಿಗೆ ಅಟ್ಟಲಾಗಿತ್ತು ಎಂದರು.
ವ್ಯಾಗನ್ ದುರಂತ 1921,ನ.21ರಂದು ನಡೆದಿತ್ತು. ಬ್ರಿಟಿಷರ ವಿರುದ್ಧ ಬಂಡೆದ್ದಿದ್ದ ಆ ರೈತರನ್ನು (ಮಾಪಿಳ್ಳೆ ಕೈದಿಗಳು) ಕೊಯಿಮತ್ತೂರು ಜೈಲಿಗೆ ರವಾನಿಸಲು ಆಹಾರ ಮತ್ತು ನೀರು ನೀಡದೆ ಕಿಟಕಿಗಳಿಲ್ಲದ ವ್ಯಾಗನ್ನಲ್ಲಿ ತುಂಬಲಾಗಿತ್ತು. 70 ರೈತರು ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ಕೆಲವರು ತಮ್ಮದೇ ಮೂತ್ರವನ್ನು ಸೇವಿಸಿ ಜೀವವುಳಿಸಿಕೊಂಡಿದ್ದರು. ಈ ಘಟನೆಯನ್ನು ʼದಕ್ಷಿಣದ ಜಲಿಯನ್ ವಾಲಾ ಬಾಗ್ 'ಎಂದು ಕರೆಯಲಾಗಿತ್ತು. 1972ರಲ್ಲಿ ಕೇರಳ ಸರಕಾರವು ಇದನ್ನು 'ವ್ಯಾಗನ್ ದುರಂತ 'ಎಂದು ಹೆಸರಿಸಿತ್ತು.