ನವದೆಹಲಿ: ಕೊರೊನಾ ಮೂರನೇ ಅಲೆ ಆತಂಕದ ನಡುವೆ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗುವುದು ಯಾವಾಗ ಎಂಬ ಪ್ರಶ್ನೆ ಪೋಷಕರದ್ದಾಗಿದೆ. ಈಗಾಗಲೇ ಹಲವು ದೇಶಗಳು ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದ್ದು, ನಮ್ಮ ದೇಶದಲ್ಲಿ ಮಕ್ಕಳಿಗೆ ಲಸಿಕೆ ಯಾವಾಗ ಲಭ್ಯವಾಗಬಹುದು ಎಂಬುದು ಪೋಷಕರ ಆತಂಕವಾಗಿದೆ.
ಇದಕ್ಕೆ ಉತ್ತರ ನೀಡಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆ ನಿರ್ದೇಶಕಿ ಪ್ರಿಯಾ ಅಬ್ರಹಂ, ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.
ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಒಟಿಟಿ ವೇದಿಕೆಯ 'ಇಂಡಿಯಾ ಸೈನ್ಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾ ಅಬ್ರಹಾಂ, 'ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಬಹುದು. ಈಗಾಗಲೇ 2ರಿಂದ 18 ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ಪ್ರಯೋಗಗಳು ನಡೆಯುತ್ತಿವೆ' ಎಂದು ಹೇಳಿದ್ದಾರೆ.
'2ರಿಂದ 18 ವಯಸ್ಸಿನವರಿಗೆ 2/3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯೋಗದ ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ. ಅವುಗಳನ್ನು ಔಷಧ ನಿಯಂತ್ರಕರಿಗೆ ನೀಡಲಾಗುವುದು. ಸೆಪ್ಟೆಂಬರ್ ಅಥವಾ ಸೆಪ್ಟೆಂಬರ್ ನಂತರ ಮಕ್ಕಳಿಗೆ ಲಸಿಕೆ ದೊರೆಯುವ ನಿರೀಕ್ಷೆಯಿದೆ' ಎಂದು ತಿಳಿಸಿದರು.
ಮಕ್ಕಳ ಮೇಲಿನ ಲಸಿಕಾ ಪ್ರಯೋಗ ಕಾರ್ಯದಲ್ಲಿ ಝೈಡಸ್ ಕ್ಯಾಡಿಲಾ ಲಸಿಕೆ ಪ್ರಯೋಗಗಳು ನಡೆಯುತ್ತಿವೆ. ಆ ಲಸಿಕೆಗಳು ಸಹ ಲಭ್ಯವಾಗಬಹುದು ಎಂದು ಮಾಹಿತಿ ನೀಡಿದರು. ಝೈಡಸ್‌ನೊಂದಿಗೆ ಜೆನೊವಾ, ಬಯೋಲಾಜಿಕಲ್ ಇ, ನೋವಾವ್ಯಾಕ್ಸ್ ಲಸಿಕೆಗಳು ಕೂಡ ಪೈಪ್‌ಲೈನ್‌ನಲ್ಲಿವೆ ಎಂದು ಹೇಳಿದರು.
ಕಳೆದ ತಿಂಗಳು ಈ ಸಂಬಂಧ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, 'ಮಕ್ಕಳಿಗೆ ಶೀಘ್ರದಲ್ಲಿಯೇ ಕೊರೊನಾ ಲಸಿಕೆ ಲಭ್ಯವಾಗಲಿದೆ' ಎಂದಿದ್ದರು. ಆದರೆ ನಿರ್ದಿಷ್ಟ ದಿನಾಂಕ ಅಥವಾ ತಿಂಗಳನ್ನು ಹೇಳಿರಲಿಲ್ಲ.
ದೇಶದಲ್ಲಿ ಆಗಸ್ಟ್ ತಿಂಗಳ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಈಗಾಗಲೇ ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಅಲೆಯು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ತುರ್ತಾಗಿ ಲಸಿಕೆ ನೀಡುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಪ್ರಯೋಗವನ್ನೂ ಆರಂಭಿಸಲಾಗಿದೆ. ಆದರೆ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ.
ಮಕ್ಕಳಲ್ಲಿನ ಕೊರೊನಾ ಸೋಂಕಿನ ಕುರಿತು ಸಮಾಧಾನಕರ ಸಂಗತಿಯೊಂದನ್ನು ಅಧ್ಯಯನವೊಂದು ತಿಳಿಸಿದೆ. ಸೋಂಕು ತಗುಲಿದ ಮಕ್ಕಳು ಅಲ್ಪಾವಧಿಯಲ್ಲೇ ಗುಣಮುಖರಾಗುತ್ತಾರೆ ಎಂಬುದಾಗಿ ವರದಿ ಹೇಳಿದೆ. 'ಕೊವಿಡ್-19 ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡ ಮಗು ಕೇವಲ ಆರು ದಿನಗಳಲ್ಲಿ ಗುಣಮುಖವಾಗುತ್ತದೆ. ಅದರಿಂದ ಆಚೆಗೆ ಕೊರೊನಾ ಸೋಂಕಿನ ಲಕ್ಷಣಗಳನ್ನು ಅನುಭವಿಸುತ್ತಿದ್ದ ಮಗು ಗರಿಷ್ಠ 4 ವಾರಗಳಲ್ಲಿ ಚೇತರಿಕೆ ಕಾಣುತ್ತದೆ,' ಎಂದು ಯುನೈಟೆಡ್ ಕಿಂಗ್ ಡಮ್ ನಲ್ಲಿ ನಡೆಸಿರುವ ಅಧ್ಯಯನದ ಕುರಿತು 'ದಿ ಲ್ಯಾನ್ಸೆಟ್ ಚೈಲ್ಡ್ ಆಂಡ್ ಅಡೋಲ್ಸೆಂಟ್ ಹೆಲ್ತ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವೊವ್ಯಾಕ್ಸ್ ಕೊರೊನಾ ಲಸಿಕೆಯ ಪ್ರಯೋಗವನ್ನು ಮಕ್ಕಳ ಮೇಲೆ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿದೆ. ಒಟ್ಟು 920 ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದ್ದು, 2 ರಿಂದ 17 ವರ್ಷದ ಮಕ್ಕಳು ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ. ಈ ವಯೋಮಾನದವರನ್ನೇ ಎರಡು ಗುಂಪುಗಳಾಗಿ ವಿಭಜಿಸಿ ಹತ್ತು ಕಡೆಗಳಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಪ್ರಯೋಗಕ್ಕಾಗಿ 2 ರಿಂದ 11 ವರ್ಷ ಹಾಗೂ 12 ರಿಂದ 17 ವರ್ಷದ ಮಕ್ಕಳ ಗುಂಪುಗಳನ್ನು ಮಾಡಲಾಗಿದೆ.
ಭಾರತ್ ಬಯೋಟೆಕ್ (ಕೋವ್ಯಾಕ್ಸಿನ್) ಹಾಗೂ ಝೈಡಸ್ ಕ್ಯಾಡಿಲಾ (ಝೈಕೋವಿಡ್) ಈಗಾಗಲೇ ಮಕ್ಕಳ ಮೇಲೆ ಪ್ರಯೋಗವನ್ನು ಆರಂಭಿಸಿವೆ.