ಪುಣೆ: ಕೊರೋನ ವೈರಸ್‌ನ ಮೂರನೇ ಅಲೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯೆ ಯಾವುದೇ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂದಾಜಿಸಿದೆ. ಆದರೆ ಇದು ಎರಡನೇ ಅಲೆಯ ತೀವ್ರತೆಗೆ ಹೋಲಿಸಿದರೆ ಸೌಮ್ಯ ಸ್ವರೂಪದ್ದಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.
"ಇಡೀ ದೇಶಕ್ಕೆ ಮೂರನೇ ಅಲೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಸಮೀರನ್ ಪಾಂಡಾ ಹೇಳಿದ್ದಾರೆ. "ಇದೀಗ ಜಿಲ್ಲಾವಾರು ಅಥವಾ ರಾಜ್ಯಗಳಿಗೆ ಸೀಮಿತವಾದ ಅಂಕಿ ಅಂಶಗಳನ್ನು ಬಳಸಿಕೊಂಡು ನಿರ್ದಿಷ್ಟ ಅಂದಾಜು ಮಾಡಲಾಗುತ್ತಿದೆ. ರಾಜ್ಯಗಳು ಅವಧಿಗಿಂತ ಮುನ್ನ ನಿರ್ಬಂಧಗಳನ್ನು ಸಡಿಲಿಸಿದರೆ ಮಾತ್ರ ಈ ಅಲೆ ಕಾಣಿಸಿಕೊಳ್ಳಬಹುದು. ಹೊಸ ತೀವ್ರ ಪ್ರಸರಣ ಸಾಮರ್ಥ್ಯದ ಪ್ರಬೇಧ ಕಂಡುಬಂದರೆ ಅಥವಾ ಜನಸಾಮಾನ್ಯರ ಮಟ್ಟದಲ್ಲಿ ಕೋವಿಡ್-19 ಶಿಷ್ಟಾಚಾರಗಳ ಉಲ್ಲಂಘನೆ ಸ್ಪಷ್ಟವಾಗಿ ಆದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು" ಎಂದು ಪಾಂಡಾ ಅಭಿಪ್ರಾಯಪಟ್ಟಿದ್ದಾರೆ.
ಸಹಜವಾಗಿ ಅಥವಾ ಲಸಿಕೆ ಕಾರಣದಿಂದ ಸೃಷ್ಟಿಯಾಗಬೇಕಾದ ಪಾಸಿಟಿವಿಟಿ ಕಡಿಮೆಯಾಗುವುದು, ಡೆಲ್ಟಾದಂಥ ಇನ್ನಷ್ಟು ಮಾರಕ ಪ್ರಬೇಧಗಳು ರೂಪುಗೊಳ್ಳುವುದು ಇಲ್ಲವೇ ಕೋವಿಡ್ ಸೂಕ್ತ ನಡವಳಿಕೆಗಳನ್ನು ಸಡಿಲಿಸುವುದು ಅಥವಾ ಅಸಮರ್ಪಕ ಲಸಿಕೆ ಸುರಕ್ಷೆ ಮತ್ತಿತರ ಕಾರಣಗಳು ಅಲೆಗೆ ಕಾರಣವಾಗಬಹುದಾದ ಪ್ರಮುಖ ಅಂಶಗಳು ಎಂದು ಅವರು ವಿಶ್ಲೇಷಿಸಿದ್ದಾರೆ.
"ಎರಡನೇ ಅಲೆಯಲ್ಲಿ ಕಡಿಮೆ ಸಂಖ್ಯೆಯನ್ನು ದಾಖಲಿಸಿದ್ದ ಜಿಲ್ಲೆಗಳಲ್ಲಿ ಈ ಬಾರಿ ಪ್ರಕರಣಗಳು ಹೆಚ್ಚಬಹುದು. ಆದರೆ ಅತ್ಯಧಿಕ ಸೋಂಕಿನ ದರವನ್ನು ದಾಖಲಿಸಿದ ಜಿಲ್ಲೆಗಳಲ್ಲಿ ಅಧಿಕ ಪ್ರಕರಣಗಳು ಕಂಡುಬರುವ ಸಾಧ್ಯತೆ ಕಡಿಮೆ" ಎಂದು ಅಂದಾಜಿಸಿದ್ದಾರೆ.