ಹೈದರಾಬಾದ್: ತೀವ್ರ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ 36 ವರ್ಷದ ಮಹಿಳೆಯೊಬ್ಬರು ಬರೊಬ್ಬರಿ 41 ದಿನಗಳ ಕಾಲ ಹೋರಾಡಿ ಚೇತರಿಕೆ ಕಂಡಿರುವ ಪ್ರಕರಣ ಹೈದರಾಬಾದ್ ನಲ್ಲಿ ವರದಿಯಾಗಿದೆ.
ಇಲ್ಲಿನ ಮೆಡಿಕವರ್ ಆಸ್ಪತ್ರೆಯ ಇಸಿಎಂಒ ಸಪೋರ್ಟ್ ಮೂಲಕ ಕೋವಿಡ್-19 ಸೋಂಕಿನಿಂದ ಮಹಿಳೆ ಚೇತರಿಕೆ ಕಂಡಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಈ ಮಹಿಳೆಯನ್ನು ಮೇ.11 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾರಂಭದ ಹಂತದಲ್ಲಿ ವೈದ್ಯರು ಹೆಚ್ಚು ಹರಿವಿನ ಆಮ್ಲಜನಕದ ಮೂಲಕ ಚಿಕಿತ್ಸೆ ನೀಡಲು ಯತ್ನಿಸಿದರು. ಆದರೆ ಅದರಿಂದ ಪ್ರಯೋಜನವಾಗದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಅಳವಡಿಸಿದರು.
ಪ್ರೋನ್ ಪೊಸಿಷನ್ ನಲ್ಲಿದ್ದು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಆಕೆಯ ಆಮ್ಲಜನಕ ಪ್ರಮಾಣ ಸುಧಾರಣೆ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರು ಬೇರೆ ಆಯ್ಕೆ ಇಲ್ಲದೇ ಇಸಿಎಂಒ ಸಪೋರ್ಟ್ ಮೊರೆ ಹೋದರು. ಅತ್ಯಂತ ನಿಧಾನಗತಿಯ ಚೇತರಿಕೆ ಇದರಲ್ಲಿ ಕಂಡುಬಂದಿತ್ತು. 90 ದಿನಗಳ ಪೈಕಿ 41 ದಿನಗಳ ಕಾಲ ಆಕೆಯ ಪರಿಸ್ಥಿತಿಯಲ್ಲಿ ತೀವ್ರವಾದ ಏರಿಳಿತ ಕಂಡುಬಂದಿತ್ತು. ಕೆಲವು ಪರಿಸ್ಥಿತಿಗಳಲ್ಲಿ ಆಕೆ ಬದುಕಿ ಉಳಿಯುವುದೇ ಇಲ್ಲ ಎಂದು ವೈದ್ಯರು ನಿರ್ಧರಿಸಿದ್ದರು. ವೈದ್ಯರು ಶಕ್ತಿ ಮೀರಿ ಪ್ರಯತ್ನಿಸಿದ್ದರ ಫಲವಾಗಿ ಆಕೆ ಚೇತರಿಕೆಗೆ ಸಹಕಾರ ದೊರೆಯಿತು.
ಹಲವು ಬಾರಿ ಇಸಿಎಂಒ ದಿಂದ ಮಹಿಳೆಯನ್ನು ಕರೆತರಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೆಲವು ಸಮಯದ ನಂತರ ಆಕೆಯ ಕಿಡ್ನಿ ಸಹ ಕೈಕೊಡಲು ಪ್ರಾರಂಭಿಸಿ ಡಯಾಲಿಸಿಸ್ ಅಗತ್ಯತೆ ಎದುರಾಯಿತು. ಕ್ರಮೇಣ ಇಸಿಎಂಒ ಸಪೋರ್ಟ್ ನ್ನು ಹಿಂತೆಗೆಯಲಾಯಿತು. 41 ದಿನಗಳಲ್ಲಿ ಇಸಿಎಂಒ ಸಪೋರ್ಟ್ ನಿಂದ ಮಹಿಳೆಯನ್ನು ಹೊರತರಲಾಯಿತು ಹಾಗೂ ವೆಂಟಿಲೇಟರ್ ಸಪೋರ್ಟ್ ನಲ್ಲಿರಿಸಲಾಯಿತು. ನಂತರ ಹೈಫ್ಲೋ ಆಕ್ಸಿಜನ್ ಗೆ ವರ್ಗಾವಣೆ ಮಾಡಿ ವೆಂಟಿಲೇಟರ್ ನಿಂದಲೂ ಹೊರತರಲಾಯಿತು. ಈ ನಡುವೆ ಆಕೆಯ ಕಿಡ್ನಿಯ ಆರೋಗ್ಯವೂ ಸುಧಾರಣೆ ಕಂಡು ಡಯಾಲಿಸಿಸ್ ನ್ನೂ ನಿಲ್ಲಿಸಲಾಯಿತು.
ಮಹಿಳೆ ಆಸ್ಪತ್ರೆಗೆ ದಾಖಲಾದ ಪರಿಸ್ಥಿತಿಯನ್ನು ಹೋಲಿಕೆ ಮಾಡಿದರೆ ಆಕೆ ಸಂಪೂರ್ಣ ಚೇತರಿಕೆ ಕಂಡಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ದೀರ್ಘಕಾಲ ಇಸಿಎಂಒ ಸಪೋರ್ಟ್ ನಲ್ಲಿರುವ ರೋಗಿಗಳು ಅದರಿಂದ ಆಚೆ ಬರುವುದು ಕಷ್ಟ ಆಕೆಯ ಆರೋಗ್ಯ ಚೇತರಿಗೆಕೆ ಸಿಟಿ ಸರ್ಜನ್ ಗಳು, ಐಸಿಯು ನರ್ಸ್, ಫಿಸಿಯೋಥೆರೆಪಿಸ್ಟ್ ಗಳು ಹಾಗೂ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಗಳು ಅವಿರತ ಶ್ರಮ ವಹಿಸಿದ್ದಾರೆ ಎಂದು ವೈದ್ಯ ಡಾ.ಘನಶ್ಯಾಮ್ ಎಂ ಜಗದ್ಕರ್ ಹೇಳಿದ್ದಾರೆ.