ನವದೆಹಲಿ: ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪರಿಸ್ಥಿತಿ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವಿವರವಾದ ಮಾತುಕತೆ ನಡೆಸಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆಫ್ಘನ್ ಪರಿಸ್ಥಿತಿಗಳ ಜೊತೆಗೆ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಮಂಗಳವಾರ ಸಮಗ್ರ ಚರ್ಚೆ ನಡೆಸಲಾಯಿತು. ನಮ್ಮಿಬ್ಬರ ನಡುವಣ ಪರಸ್ಪರ ಪ್ರಯೋಜನಕಾರಿ ಮಾತುಕತೆ ನಡೆಯಿತು. ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮಂಗಳವಾರ ಟ್ವೀಟರ್ ನಲ್ಲಿ " ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನನ್ನ ಮಿತ್ರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವಿವರವಾಗಿ ಮಾತುಕತೆ ನಡೆಸಿದೆ. ಪರಸ್ಪರ ಪ್ರಯೋಜನವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಕೋವಿಡ್ -19 ಸಾಂಕ್ರಾಮಿಕ ವಿಷಯದಲ್ಲಿ ಭಾರತ -ರಷ್ಯಾ ನಡುವಣ ಸಹಕಾರದ ಜೊತೆಗೆ ದ್ವಿಪಕ್ಷೀಯ ಕಾರ್ಯಸೂಚಿ ಬಗ್ಗೆ ಚರ್ಚೆ ನಡೆಸಿದವು. ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ಮುಂದುವರಿಸಲು ಸಮ್ಮತಿಸಿದೆವು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕ್ಯಾಬೂಲ್ ನಿಂದ ತನ್ನ ರಾಯಭಾರ ಕಾರ್ಯಾಲಯವನ್ನು ಭಾರತ ತೆರವುಗೊಳಿಸಿದೆ. ತಾಲಿಬಾನ್ ಗಳ ಆಡಳಿತ ಶೈಲಿ, ಇತರ ಪ್ರಜಾ ಪ್ರಭುತ್ವ ದೇಶಗಳ ಸ್ಪಂದನೆಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಭಾರತ ಹೇಳಿದೆ. ರಷ್ಯಾ ತನ್ನ ರಾಯಭಾರಿ ಕಛೇರಿಗಳನ್ನು ಕಾಬೂಲ್ ನಲ್ಲಿ ಮುಂದುವರಿಸಿದೆ. ತಾಲಿಬಾನ್ ಜೊತೆ ಸಂಪರ್ಕ ಸಾಧಿಸುವ ಎಲ್ಲಾ ಮಾರ್ಗಗಳನ್ನು ತೆರೆದುಕೊಂಡಿದೆ. ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಲು ಅಳೆದು ತೂಗಿ ಪರಿಶೀಲಿಸಲಿದೆ. ಅತಿ ಸಂಪ್ರದಾಯವಾದಿ ಆಡಳಿತಗಾರರ ವಿರುದ್ದ ನಿರ್ಣಯ ತೆಗೆದುಕೊಳ್ಳಲು ತಾವು ಆತುರಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಫ್ಘಾನಿಸ್ತಾನದಿಂದ ವಲಸೆಹೋಗಿರುವ ಜನರನ್ನು ರಷ್ಯಾ, ಮತ್ತಿತರ ದೇಶಗಳಿಗೆ ಕಳುಹಿಸಲು ಪಾಶ್ಚಾತ್ಯ ದೇಶಗಳ ಆಲೋಚನೆಗೆ ರಷ್ಯಾ ಅಧ್ಯಕ್ಷ ಪುಟಿನ್ ತೀವ್ರ ವಿರೋಧ ವ್ಯಕ್ತಪಡಿಸಿದರು. ವಲಸಿಗರ ಹೆಸರಿನಲ್ಲಿ ಭಯೋತ್ಪಾದಕರು ರಷ್ಯ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.