ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆಯ ಎರಡು ಡೋಸ್ ತೆಗೆದುಕೊಂಡ 87,000 ಜನರಿಗೆ ಮತ್ತೆ ಸೋಂಕು ಬಾಧಿಸಿರುವುದು ಪತ್ತೆಯಾಗಿದೆ. ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಅತಿ ಹೆಚ್ಚು ಕೊರೋನಾ ದರವನ್ನು ಹೊಂದಿರುವ ಕೇರಳದಲ್ಲಿ, ಎರಡೂ ಡೋಸ್ ಗಳನ್ನು ಪಡೆದ ಶೇ. 46 ಮಂದಿ ಜನರಿಗೆ ಸೋಂಕು ಪತ್ತೆಯಾಗಿದೆ.
ಕೇರಳದಲ್ಲಿ, ಲಸಿಕೆಯ ಮೊದಲ ಡೋಸ್ ಪಡೆದ ಸುಮಾರು 80,000 ಜನರಿಗೂ ಮತ್ತು ಎರಡನೇ ಡೋಸ್ ಪಡೆದ 40,000 ಜನರಿಗೂ ಕೊರೋನಾ ದೃಢsಪಟ್ಟಿದೆ. ದೇಶಾದ್ಯಂತ ವೈರಸ್ ಹರಡುವಿಕೆ ಕಡಿಮೆಯಾಗಿದ್ದರೂ, ಕೇರಳದಲ್ಲಿ ದೈನಂದಿನ ಕೊರೋನ ದರ ಹೆಚ್ಚಾಗುತ್ತಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಕೇರಳದ ವಯನಾಡಿನಲ್ಲಿ ಮೊದಲ ಡೋಸ್ ಲಸಿಕೆಯನ್ನು ಶೇ 100 ರಷ್ಟು ಪೂರ್ಣಗೊಳಿಸಿದ ಪ್ರದೇಶದಲ್ಲೂ ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಗಮನಸೆಳೆದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 21,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.