ನವದೆಹಲಿ: ರಾಜಕೀಯವನ್ನು ಶೂನ್ಯ ಅಪರಾಧೀಕರಣಗೊಳಿಸುವ ನಿಟ್ಟಿನಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, 48 ಗಂಟೆಯೊಳಗೆ ಅಭ್ಯರ್ಥಿಯ ಸಂಪೂರ್ಣ ಅಪರಾಧ ಜಾತಕವನ್ನು ಸಾರ್ವಜನಿಕಗೊಳಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಹಿಂದಿನ ತನ್ನ ಆದೇಶವನ್ನು ಮತ್ತಷ್ಟು ಸಬಲೀಕರಣಗೊಳಿಸಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ ಜಾತಕವನ್ನು ರಾಜಕೀಯ ಪಕ್ಷಗಳು ಚುನಾವಣೆ ನಡೆಯುವುದಕ್ಕೆ 48 ಗಂಟೆಗೆ ಮುನ್ನವೇ ಸಾರ್ವಜನಿಕಗೊಳಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ 2020 ಫೆಬ್ರವರಿಯಲ್ಲಿ ಇದೇ ಮಾದರಿಯ ನೀಡಿದ್ದ ಆದೇಶಕ್ಕೆ ಮಾರ್ಪಾಡು (ಆದೇಶದ ಪ್ಯಾರಾ 4.4) ತಂದು ಈ ಮಹತ್ವದ ಆದೇಶ ನೀಡಿದ್ದು, ಚುನಾವಣೆಗೂ ಮುನ್ನವೇ ಅಭ್ಯರ್ಥಿಗಳ ಅಪರಾಧ ಜಾತಕವನ್ನು 48 ಗಂಟೆಯೊಳಗೆ ಸಾರ್ವಜನಿಕಗೊಳಿಸುವುದು ಕಡ್ಡಾಯ ಎಂದು ಹೇಳಿದೆ. 2020ರಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಕಾಲದಲ್ಲಿ ಅನೇಕ ಅಭ್ಯರ್ಥಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ತಮ್ಮ ಅಪರಾಧ ವೃತ್ತಾಂತವನ್ನು ಬಹಿರಂಗಗೊಳಿಸಿರಲಿಲ್ಲ. ಈ ಸಂಬಂಧ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಅಪರಾಧ ಹಿನ್ನಲೆ ಬಹಿರಂಗ ಕಡ್ಡಾಯ ಎಂದು ಹೇಳಿತ್ತು. ಆದರೆ ಈ ಆದೇಶ ಸರಿಯಾದ ಪಾಲನೆಯಾಗದ ಹಿನ್ವಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಈ ಮಹತ್ವದ ಆದೇಶ ನೀಡಿದೆ.
ಎಲ್ಲಾ ರಾಜಕೀಯ ಪಕ್ಷಗಳೂ ತಾನು ಆಯ್ಕೆ ಮಾಡಿರುವ ಅಭ್ಯರ್ಥಿ ಅಪರಾಧ ಹಿನ್ನೆಲೆ ಹೊಂದಿದ್ದರೂ ಅವರನ್ನು ಏಕೆ ಚುನಾವಣೆ ಸ್ಪರ್ಧೆಗೆ ಏಕೆ ಆಯ್ಕೆ ಮಾಡಲಾಗಿದೆ? ಮತ್ತು ಆ ಅಪರಾಧ ವೃತ್ತಾಂತಗಳ ವಿವರವನ್ನು ಪಕ್ಷಗಳ ವೆಬ್ಸೈಟ್ನಲ್ಲಿ ಸಮಗ್ರವಾಗಿ ಪ್ರಕಟಿಸಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಹೈಕೋರ್ಟ್‌ನ ಪೂರ್ವಾನುಮತಿಯಿಲ್ಲದೆ ಕೇಸ್ ಗಳನ್ನು ಹಿಂಪಡೆಯುವಂತಿಲ್ಲ
ಇದೇ ವೇಳೆ ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಶಾಸಕಾಂಗ ಸಭೆಗಳ ಸದಸ್ಯರ (ಶಾಸಕರು) ವಿರುದ್ಧದ ಅಪರಾಧ ಪ್ರಕರಣಗಳನ್ನು ಸಂಬಂಧಿತ ಹೈಕೋರ್ಟ್‌ನ ಪೂರ್ವಾನುಮತಿಯಿಲ್ಲದೆ ಹಿಂಪಡೆಯಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿನೀತ್ ಸರನ್ ಅವರ ತ್ರಿಸದಸ್ಯ ಪೀಠವು ಈ ವಿಷಯದಲ್ಲಿ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ನೀಡಿದ ಸಲಹೆಯನ್ನು ಒಪ್ಪಿಕೊಂಡಿದೆ.
"ಸೆಪ್ಟೆಂಬರ್ 16, 2020 ರಿಂದ ಮಧ್ಯ ಪ್ರದೇಶ ಶಾಸಕರ ವಿರುದ್ಧದ ಕೇಸುಗಳನ್ನು ಹಿಂಪಡೆಯುವುದನ್ನು ಪರೀಕ್ಷಿಸಲು ಹೈಕೋರ್ಟ್‌ಗಳನ್ನು ಕೋರಲಾಗಿತ್ತು. ಈ ಸಂಬಂಧ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಯನ್ನು ಕೋರಿ ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕ್ಕೊಂಡು ಈ ಆದೇಶ ನೀಡಿದೆ.