ಬೆಂಗಳೂರು: ಕಳೆದ ಒಂದು ತಿಂಗಳಿನಲ್ಲಿ (ಜುಲೈ 25ರಿಂದ ಆಗಸ್ಟ್ 25) ಕೇರಳದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 4.96 ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 3.35 ಲಕ್ಷದಿಂದ 3.51ಕ್ಕೆ ಏರಿಕೆಯಾಗಿದೆ.
ಒಟ್ಟು ಕೋವಿಡ್ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 98,323 ರಿಂದ 1.08 ಲಕ್ಷಕ್ಕೆ ಏರಿಕೆಯಾಗಿರುವುದರಿಂದ ಒಟ್ಟು ಪ್ರಕರಣಗಳಲ್ಲಿ ಶೇ 10. 53 ರಷ್ಟು ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಕೊಡಗಿನಲ್ಲಿ ಪ್ರಕರಣಗಳ ಸಂಖ್ಯೆ 32,622 ರಿಂದ 34, 874ಕ್ಕೆ ಏರಿಕೆಯಾಗಿದೆ. ಅಂದರೆ ಶೇ. 6.90 ರಷ್ಟು ಹೆಚ್ಚಳದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಕಳೆದ ತಿಂಗಳು ಗಡಿ ಭಾಗದ 17 ಚೆಕ್ ಪಾಯಿಂಟ್ ಗಳಲ್ಲಿ ಜನರ ತಪಾಸಣೆ ನಡೆಸಲಾಗುತ್ತಿದೆ. ಇದರಲ್ಲಿ ಎರಡು ಪ್ರಮುಖ ಪ್ರವೇಶ ದ್ವಾರಗಳಾಗಿದ್ದರೆ ಉಳಿದವು ಗ್ರಾಮಾಂತರ ಪ್ರದೇಶಗಳಿಗೆ ಸೇರಿವೆ. ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಅಲ್ಲಿದ್ದು, ಆರ್ ಟಿ - ಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಕೇರಳದಿಂದ ಬರುವವರನ್ನು ರಾಜ್ಯದೊಳಗೆ ಬಿಡುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ರೈಲು ನಿಲ್ದಾಣಗಳಲ್ಲಿ ದಿನದ 24 ಗಂಟೆಯೂ ಆರ್ ಟಿ- ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. ನೆಗೆಟಿವ್ ವರದಿ ಇರುವ ಕೇರಳದ ವಿದ್ಯಾರ್ಥಿಗಳನ್ನು ರಾಜ್ಯದೊಳಗೆ ಬಿಡಲಾಗುತ್ತಿದೆ. ಆದರೆ, ಅವರು ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಅಂಥವರಲ್ಲಿ ಒಂದು ವೇಳೆ ಪಾಸಿಟಿವ್ ಕಂಡುಬಂದರೆ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಐಸೋಲೇಷನ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಗೆ ನೆಗೆಟಿವ್ ವರದಿ ಹೊಂದಿರುವವರು ಮಾತ್ರ ಪ್ರವೇಶಕ್ಕೆ ಅನುಮತಿ ಹೊರತಾಗಿಯೂ ಶೇ. 20 ರಷ್ಟು ಪ್ರಯಾಣಿಕರಿಗೆ ರಾಪಿಡ್ ಅಂಟಿಜೆನ್ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಕಾಣಿಸಿಕೊಂಡರೆ ಅವರನ್ನು ವಾಪಸ್ ಕೇರಳಕ್ಕೆ ಕಳುಹಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ತಿಳಿಸಿದರು.
ಹೊಸ ಪ್ರಕರಣಗಳು ಹೆಚ್ಚಾಗಿದ್ದರೂ, ಈ ನಾಲ್ಕು ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಮತ್ತು ಸಕ್ರಿಯ ಪ್ರಕರಣಗಳು ಶೇಕಡಾ 2.66 ರಷ್ಟು ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸಕ್ರಿಯ ಪ್ರಕರಣಗಳ ಸಂಖ್ಯೆ 2, 010 ರಿಂದ 2, 780ಕ್ಕೆ ಏರಿಕೆಯಾಗಿದ್ದರೆ, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಇಳಿಕೆ ಕಂಡುಬಂದಿದೆ.
ಗಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಿದ್ದರೆ ರಾಜ್ಯಕ್ಕೆ ಬರುವ ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಪ್ರದೀಪ್ ಬಾನಂದೂರು ಅಭಿಪ್ರಾಯಪಟ್ಟಿದ್ದು, ಜನರು ಅನಗತ್ಯ ಪ್ರಯಾಣಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.