ಗುವಾಹಟಿ: ಅಸ್ಸಾಂನಲ್ಲಿ ಸೋಮವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 4ರ ತೀವ್ರತೆಯ ಭೂಕಂಪ ಸಂಭವಿಸಿದೆ. ಉತ್ತರ ಬಂಗಾಳದಲ್ಲೂ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ಪ್ರಕಾರ ಮಧ್ನಾಹ್ನ 1.13ರ ಹೊತ್ತಿಗೆ ಭೂಕಂಪ ಸಂಭವಿಸಿದೆ.
ಪಶ್ಚಿಮ ಅಸ್ಸಾಂನ ಕೊಕ್ರಜಾರ್ ಪ್ರದೇಶದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. ಇದು ಮೇಘಾಲಯದ ತುರಾದಿಂದ ಉತ್ತರಕ್ಕೆ 90 ಕಿ.ಮೀ ದೂರದಲ್ಲಿದೆ.
ಪಶ್ಚಿಮ ಅಸ್ಸಾಂ ಮತ್ತು ಉತ್ತರ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ಗಾಬರಿಯಾದ ಜನರು ತಮ್ಮ ಮನೆಗಳಿಂದ ಹೊರಬಂದರು.
ಭೂಕಂಪದಿಂದಾಗಿ ಯಾವುದೇ ಸಾವು-ನೋವು ಸಂಭವಿಸಿದ, ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳು ಹೆಚ್ಚಿನ ಭೂಕಂಪನ ವಲಯದಲ್ಲಿದ್ದು, ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪ ಸಂಭವಿಸುತ್ತಿರುತ್ತದೆ.
ಎಪ್ರಿಲ್ 28ರಂದು ಅಸ್ಸಾಂ ಹಾಗೂ ಈಶಾನ್ಯದ ಹಲವು ಭಾಗಗಳಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು.