ನವದೆಹಲಿ: ವಕೀಲರು ನಡೆಸುವ ಮುಷ್ಕರವನ್ನು ಮೊಟಕುಗೊಳಿಸುವ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನೆ ನಡೆಸುವ ಹಾಗೂ ಇತರರನ್ನು ಪ್ರತಿಭಟನೆಗೆ ಉತ್ತೇಜಿಸುವರ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯವಾದ ನಿಯಮಗಳನ್ನು ರೂಪಿಸಲು ಸೆ. 4 ರಂದು ಎಲ್ಲ ರಾಜ್ಯಗಳ ಬಾರ್ ಕೌನ್ಸಿಲ್ ಮತ್ತು ಅಸೋಸಿಯೇಷನ್‌ಗಳ ಸಭೆ ಕರೆಯಲಾಗಿದೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ (ಬಿಸಿಐ) ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. 'ಈ ಸಭೆಯಲ್ಲಿ ನಿಯಮಗಳನ್ನು ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗುತ್ತದೆ' ಎಂದು ಮಿಶ್ರಾ ತಿಳಿಸಿದರು.
ಮನನ್ ಕುಮಾರ್ ಮಿಶ್ರಾ ಅವರ ವಾದವನ್ನು ದಾಖಲಿಸಿಕೊಂಡ ಪೀಠ, ಈ ವಿಷಯದ ಬಗ್ಗೆ ಬಿಸಿಐ ತೆಗೆದುಕೊಂಡಿರುವ ಕ್ರಮವನ್ನು ಶ್ಲಾಘಿಸಿತು.
ಮಿಶ್ರಾ ಅವರ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ ಮೂರನೇ ವಾರಕ್ಕೆ ಮುಂದೂಡಿತು.