ನವದೆಹಲಿ: 'ದೇಶದಲ್ಲಿ ಇದುವರೆಗೆ 50 ಕೋಟಿಗೂ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ' ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಹೇಳಿದೆ.
'ಈ ತಿಂಗಳ ಸರಾಸರಿ ದೈನಂದಿನ ಪರೀಕ್ಷೆಗಳ ಸಂಖ್ಯೆಯು 17 ಲಕ್ಷಕ್ಕಿಂತ ಹೆಚ್ಚಿದೆ. ದೇಶದಲ್ಲಿ 55 ದಿನಗಳಲ್ಲಿ 10 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ವರ್ಷ ಜುಲೈ 21ರ ತನಕ 45 ಕೋಟಿ ಪರೀಕ್ಷೆಗಳನ್ನು ಕೈಗೊಳ್ಳಲಾಗಿತ್ತು. ಆಗಸ್ಟ್ 18ರ ವೇಳೆಗೆ ಈ ಸಂಖ್ಯೆಯು 50 ಕೋಟಿ ದಾಟಿದೆ' ಎಂದು ಐಸಿಎಂಆರ್ ತಿಳಿಸಿದೆ.
'ದೇಶದಲ್ಲಿ ಈವರೆಗೆ 50,03,00,840 ಕೋವಿಡ್ ಪರೀಕ್ಷೆಗಳನ್ನು ಕೈಗೊಳ್ಳಲಾಗಿವೆ. ಐಸಿಎಂಆರ್‌ಸಿ ಕೋವಿಡ್-19 ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ವಿಸ್ತರಿಸುತ್ತಿದೆ. ತಂತ್ರಜ್ಞಾನದ ಸದುಪಯೋಗ ಮತ್ತು ಕೈಗೆಟಕುವ ದರದ ಡಯಾಗ್ನೋಸ್ಟಿಕ್ ಕಿಟ್‌ಗಳಲ್ಲಿ ನಾವೀನ್ಯತೆ ತರುವ ಮೂಲಕ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ' ಎಂದು ಸಂಸ್ಥೆ ಮಾಹಿತಿ ನೀಡಿದೆ.
'ಕೋವಿಡ್ ಪರೀಕ್ಷೆಗಳ ಹೆಚ್ಚಳವು ಸೋಂಕು ಪತ್ತೆ, ಪ್ರತ್ಯೇಕ ವಾಸ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ನೆರವಾಗಿದೆ' ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಅವರು ಹೇಳಿದರು.