ನವದೆಹಲಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ದೇಶದಾದ್ಯಂತ 5,15,363 ವಲಸೆ ಕಾರ್ಮಿಕರು ಹುಟ್ಟೂರಿಗೆ ಮರಳಿದ್ದಾರೆ. 1ನೇ ಅಲೆ ಅವಧಿಯಲ್ಲಿ ಹೀಗೆ ಮರಳಿದ್ದ ಕಾರ್ಮಿಕರ ಸಂಖ್ಯೆ 1.14 ಕೋಟಿ.
ಬಿಕ್ಕಟ್ಟು ಎದುರಿಸುವಲ್ಲಿನ ಕಾರ್ಯವೈಖರಿಯನ್ನು ಕುರಿತಂತೆ ಟೀಕೆಗೆ ಗುರಿಯಾಗಿರುವ ಸಂಸದೀಯ ಸ್ಥಾಯಿ ಸಮಿತಿಗೆ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ.
ಕಾರ್ಮಿಕರ ವಲಸೆಯು ಮುಖ್ಯವಾಗಿ ಲಾಕ್‌ಡೌನ್ ಆಧರಿಸಿದೆ. ಎರಡನೇ ಅಲೆಯಲ್ಲಿ ಸ್ಥಳೀಯ ಸ್ಥಿತಿ ಆಧರಿಸಿ ರಾಜ್ಯಗಳು ಸ್ಥಳೀಯವಾಗಿ ಲಾಕ್‌ಡೌನ್ ವಿಧಿಸಿದ್ದವು. ಹೀಗಾಗಿ, ಹುಟ್ಟೂರಿಗೆ ಮರಳಿದ ವಲಸಿಗ ಕಾರ್ಮಿಕರ ಸಂಖ್ಯೆಯನ್ನು ಎರಡು ಅಲೆಗೆ ಸಂಬಂಧಿಸಿದಂತೆ ಪರಸ್ಪರ ಹೋಲಿಕೆ ಮಾಡಲಾಗದು ಎಂದು ಸಚಿವಾಲಯವು ಪ್ರತಿಪಾದಿಸಿದೆ.
ಆರ್‌ಜೆಡಿ ಸಂಸದ ಭರ್ತೌರಿ ಮಹತಾಬ್ ನೇತೃತ್ವದ ಕಾರ್ಮಿಕರ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಪ್ರಶ್ನೆಗೆ ಸಚಿವಾಲಯವು, ಎರಡನೇ ಅಲೆ ಅವಧಿಯಲ್ಲಿ ಒಟ್ಟು 5,15,363 ಕಾರ್ಮಿಕರು ಹುಟ್ಟೂರಿಗೆ ಮರಳಿದ್ದಾರೆ ಎಂದು ತಿಳಿಸಿದೆ.
ಮೊದಲ ಅಲೆಯಲ್ಲಿ ಹುಟ್ಟೂರಿಗೆ ಮರಳಿದ ವಲಸಿಗ ಕಾರ್ಮಿಕರಿಗೆ ನೀಡಲಾದ ಸೌಲಭ್ಯ ಕುರಿತು ರಾಜ್ಯವಾರು ಮಾಹಿತಿ ಲಭ್ಯವಿಲ್ಲ. ಎರಡನೇ ಅಲೆಯಲ್ಲಿ ಹುಟ್ಟೂರಿಗೆ ಮರಳಿದ್ದ ವಲಸಿಗ ಕಾರ್ಮಿಕರು ಕೃಷಿ ಸೇರಿದಂತೆ ಸ್ಥಳೀಯವಾಗಿ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆಯೂ ಸಮಿತಿಯು ಮಾಹಿತಿ ಕೋರಿತ್ತು.