ಬೀಜಿಂಗ್: ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣಾ ಕಾರ್ಯಕ್ರಮಗಳ ಜಾರಿ ಅಂಗವಾಗಿ ಚೀನಾ 6- 7 ವಯೋಮಾನದ ಮಕ್ಕಳಿಗೆ ಲಿಖಿತ ಪರೀಕ್ಷೆಯನ್ನು ನಿಷೇಧಿಸಿದೆ.
ದೇಶದ ಶಾಲೆಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಮಕ್ಕಳು ಹಾಗೂ ಪಾಲಕರ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಈ ಹಿಂದೆ ಮೊದಲನೇ ತರಗತಿಯಿಂದಲೇ ಮಕ್ಕಳು ಪರೀಕ್ಷೆ ಬರೆಯಬೇಕಿತ್ತು. ಇದರಿಂದಾಗಿ 18 ವಯಸ್ಸು ಬರುವ ವೇಳೆಗೆ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತಿತ್ತು.
ಈ ಹಂತದಲ್ಲಿ ಒಂದು ಅಂಕಗಳಿಂದಾಗಿ ವಿದ್ಯಾರ್ಥಿಗಳ ಕನಸು, ಭವಿಷ್ಯದ ಹಾದಿಯೇ ಬದಲಾಗುವ ವಾತಾವರಣ ಅಲ್ಲಿ ನಿರ್ಮಾಣವಾಗುತ್ತಿತ್ತು. ಇದನ್ನು ಮನಗಂಡು ಮಕ್ಕಳ ಮೇಲಿನ ಒತ್ತಡವನ್ನು ಇಳಿಸುವ ದೃಷ್ಟಿಯಿಂದ ಅಲ್ಲಿನ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಅಲ್ಲದೆ ಇತರೆ ತರಗತಿಗಳ ಪರೀಕ್ಷೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆಯೂ ಇಲಾಖೆ ಆದೇಶ ಹೊರಡಿಸಿದೆ. ಜುಲೈ ತಿಂಗಳಲ್ಲಿ ಚೀನಾ ಸರ್ಕಾರ ದೇಶದಲ್ಲಿ ಬೇರು ಬಿಟ್ಟಿದ್ದ ಟ್ಯೂಷನ್ ಮಾಫಿಯಾ ವಿರುದ್ಧ ಸಮರ ಸಾರಿತ್ತು.
ಟ್ಯೂಷನ್ ಸೆಂಟರ್ ಗಳು ಲಾಭರಹಿತ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವಂತೆ ನಿಯಮ ರೂಪಿಸಿತ್ತು. ಅಲ್ಲದೆ ಹಲವು ಟ್ಯೂಷನ್ ಸೆಂಟರ್ ಗಳನ್ನು ಮುಚ್ಚಿಸಿತ್ತು. ಅಲ್ಲದೆ ರಜಾದಿನಗಳಲ್ಲಿ ಟ್ಯೂಷನ್ ತರಗತಿ ನಡೆಸುವ ಹಾಗಿಲ್ಲ ಎಂದು ನಿರ್ಬಂಧ ವಿಧಿಸಿತ್ತು. 100 ಶತಕೋಟಿ ಡಾಲರ್ ವ್ಯವಹಾರಕ್ಕೆ ಇದರಿಂದ ಪೆಟ್ಟು ಬಿದ್ದರು ಸರ್ಕಾರದ ನಿರ್ಧಾರದಿಂದಾಗಿ ಮಕ್ಕಳು ಹಾಗೂ ಪಾಲಕರು ನಿಟ್ಟುಸಿರು ಬಿಟ್ಟಿದ್ದರು.